ಚಾಮರಾಜನಗರ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 'ಶಕ್ತಿ ಯೋಜನೆ' ಜಾರಿಗೆ ತಂದಿದ್ದು, ಲಕ್ಷಾಂತರ ಮಹಿಳೆಯರು ಪ್ರತಿದಿನ ರಾಜ್ಯಾದ್ಯಂತ ಪ್ರಯಾಣಿಸುತ್ತಿದ್ದಾರೆ. ಇದೀಗ ಪುರುಷರಿಗೂ ಉಚಿತ ಪ್ರಯಾಣ ಅವಕಾಶ ಕಲ್ಪಿಸಬೇಕೆಂಬ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, 'ಪುರುಷರಿಗೂ ಉಚಿತ ಪ್ರಯಾಣ ಯೋಜನೆ ವಿಸ್ತರಿಸಿದರೆ ಕೆಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತೆ' ಎಂದಿದ್ದಾರೆ.
ಚಾಮರಾಜನಗರದ ಯಳಂದೂರು ತಾಲೂಕು ಆಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು ಶಕ್ತಿ ಯೋಜನೆಯಿಂದ ಹಣ ಉಳಿಸುತ್ತಿದ್ದಾರೆ. ಆ ಹಣದಿಂದ ಬೇರೇನಾದರೂ ಖರೀದಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು. ಈ ವೇಳೆ ನಮಗೂ ಯಾಕೆ ಫ್ರೀ ಟಿಕೆಟ್ ಕೊಡಬಾರದು ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, 'ಗಂಡಸರಿಗೆ ಬಸ್‌ನಲ್ಲಿ ಫ್ರೀ ಕೊಟ್ರೆ ಕೆಎಸ್ಆರ್‌ಟಿಸಿ ಮುಚ್ಚಬೇಕಾಗುತ್ತೆ' ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ (ETV Bharat) ಪ್ರತಿ ಜಿಲ್ಲೆಯಲ್ಲೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇರಬೇಕು ಎಂದು ಯೋಚಿಸಿದ್ದೇನೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇವತ್ತು ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತಿಲ್ಲ. ಪ್ಲೇಗ್, ದಡರಾ ಇಲ್ಲದಂತಾಗಿದೆ. ಈ ಹಿಂದೆ ಹಿರಿಯರು ಆಸ್ಪತ್ರೆ ಮುಖ ನೋಡುತ್ತಿರಲಿಲ್ಲ. ಈಗ ಆ ಪರಿಸ್ಥಿತಿ ಇದೆಯಾ? ಎಂದು ಪ್ರಶ್ನಿಸಿದರು.
5 ವರ್ಷ ಸಿಎಂ ಆಗಿ ಮುಂದುವರೆಯಲು ಆಶೀರ್ವದಿಸಿ:ಮತ್ತೊಂದೆಡೆ, ಸಚಿವ ಹೆಚ್.ಸಿ. ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯಗೆ ಕಳಂಕ ತರಲು ಬಿಜೆಪಿ, ಜೆಡಿಎಸ್ ಹುನ್ನಾರ ನಡೆಸುತ್ತಿದೆ. ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯಲು ನೀವು ಆಶೀರ್ವಾದ ಮಾಡಬೇಕು. ಜನರ ಆಶೀರ್ವಾದ ಇರುವ ತನಕ ಸಿದ್ದರಾಮಯ್ಯ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸರ್ಕಾರ ಅಲುಗಾಡಿದರೇ ನೀವು ಸುಮ್ಮನಿರುತ್ತೀರಾ?. ಸಿದ್ದರಾಮಯ್ಯ ಸರ್ಕಾರ ಎಂದರೇ ನಾಗರಿಕ ಸರ್ಕಾರ ಎಂದರು.
ಇದನ್ನೂ ಓದಿ:ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ವಿದ್ಯಾರ್ಥಿಗಳಿಗೆ ಡಿಕೆಶಿ ಕರೆ