ಬಳ್ಳಾರಿ:ಕೋವಿಡ್ ಹಗರಣ ಸಂಬಂಧಸಂಪುಟ ಉಪ ಸಮಿತಿ ವರದಿ ಕೊಟ್ಟ ಮೇಲೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಉಪಕರಣಗಳ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ತನಿಖಾ ಆಯೋಗ ರಚಿಸಿದ್ದೆ. ಅವರು ಮಧ್ಯಂತರ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯನ್ನು ಸಚಿವ ಸಂಪುಟ ಉಪ ಸಮಿತಿ ಪರಿಶೀಲನೆ ಮಾಡುತ್ತಿದೆ. ಅವರು ಕೊಟ್ಟಿರುವ ವರದಿಯನ್ನು ನಾನು ಇನ್ನೂ ನೋಡಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ (ETV Bharat) ಬಿ.ಎಸ್. ಯಡಿಯೂರಪ್ಪ ಇದನ್ನು ರಾಜಕೀಯ ದುರುದ್ದೇಶದ ವರದಿ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನಲ್ಲ ವರದಿ ಮಾಡಿರುವುದು. ತನಿಖಾ ಆಯೋಗ ವರದಿ ಮಾಡಿದೆ. ಇವರಿಗೆ ನ್ಯಾಯಾಲಯ, ಕಾನೂನಿನ ಬಗ್ಗೆ ಗೌವರ ಇಲ್ಲ ಎಂದರೆ ಏನು ಮಾಡುವುದು?. ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಯಡಿಯೂರಪ್ಪ ವಿರುದ್ಧ ಚಾರ್ಜ್ಶೀಟ್ ಹಾಕಿರುವುದು ರಾಜಕೀಯನಾ? ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣವನ್ನು ಡೈವರ್ಟ್ ಮಾಡುವುದಕ್ಕೆ ಕೋವಿಡ್ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ವಿಪಕ್ಷ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಮುಡಾ ಪ್ರಕರಣಕ್ಕೂ ಮುಂಚೆಯೇ ನಾವು ಕೋವಿಡ್ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಆಯೋಗ ರಚಿಸಿದ್ದೆವು. ಅವರು ಸುಳ್ಳು ಹೇಳುತ್ತಿದ್ದಾರೆ. ನಾನು ಕೋವಿಡ್ ಹಗರಣದ ಬಗ್ಗೆ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಧ್ವನಿ ಎತ್ತಿದ್ದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಪ್ರಾಸಿಕ್ಯೂಷನ್: 'ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವೆ': ಶ್ರೀರಾಮುಲು