ಚಿತ್ರದುರ್ಗ: "ನಾವು ಯಾವುದೇ ಬೆದರಿಕೆಯೊಡ್ಡಿಲ್ಲ. ಸತ್ಯಾಂಶ ಜನರ ಮುಂದಿಟ್ಟಿದ್ದೇವೆ. ಆಯಾ ಕಾಲದಲ್ಲಿ ನಡೆದ ಹಗರಣಗಳ ತನಿಖೆ ನಡೆಯುತ್ತಿದೆ. ಬಿಜೆಪಿ ಕಾಲದ ಹಗರಣ ವೇಳೆ ಇಡಿ ತನಿಖೆಗೆ ಬರಲಿಲ್ಲ. ಈಗ ಏಕೆ ಇಡಿ ಅಧಿಕಾರಿಗಳು ತನಿಖೆಗೆ ಬಂದರು ನಾವು ಎಸ್ಐಟಿ ಮೂಲಕ ತನಿಖೆ ಮಾಡಿಸುತ್ತಿದ್ದೇವೆ" ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆ ನೀಡಿದರು.
ನಗರದ ಎಸ್.ಜಿ ಕಲ್ಯಾಣ ಮಂಟಪದಲ್ಲಿ ನಡೆದ ಮಾದಿಗ ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ವೈ.ವಿಜಯೇಂದ್ರ ಅವರ 'ಸಿಎಂ ಸಿದ್ಧರಾಮಯ್ಯರಿಂದ ಬೆದರಿಕೆ' ಆರೋಪ ವಿಚಾರ ಹಾಗೂ ಯಾವ ಕಾಲದಲ್ಲಿ ಯಾವ ಹಗರಣ ನಡೆದಿದೆ ತನಿಖೆ ಮಾಡಲಿ ಎಂಬ ಸವಾಲು ವಿಚಾರವಾಗಿ ಪ್ರತಿಕ್ರಿಯಿಸಿದರು. "ಭೋವಿ ನಿಗಮದ ಹಗರಣ ಮಾಡಿದವರು ಯಾರು? ಅರವತ್ತು ಕೋಟಿ ನುಂಗಿ ಹಾಕಿದವರು ಯಾರು?" ಎಂದು ಪ್ರಶ್ನಿಸಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಿದ್ದರಾಮಯ್ಯ, "ವೈಜ್ಞಾನಿಕ, ವೈಚಾರಿಕ ಶಿಕ್ಷಣ ಇರಬೇಕು. ಅನೇಕರು ಮೌಢ್ಯ ಆಚರಣೆ ಮಾಡುತ್ತಾರೆ. ನಮ್ಮ ಹಣೆಬರಹ, ಪೂರ್ವ ಜನ್ಮದ ಕರ್ಮ ಎನ್ನುತ್ತಾರೆ. ಯಾರ ಹಣೆ ಮೇಲೂ ಬ್ರಹ್ಮ ಅಲ್ಲ,ಯಾವ ದೇವರೂ ಬರೆಯಲ್ಲ. ಇದೆಲ್ಲಾ ನಾವು ನಂಬಿಕೊಂಡಿರುವಂಥದು. ಬದಲಾವಣೆ ಆಗಬೇಕು, ಜಾತಿ ವ್ಯವಸ್ಥೆಗೆ ಚಲನೆ ಇಲ್ಲ" ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.