ಬೆಂಗಳೂರು: ಮೊಣಕಾಲು ನೋವಿನ ಕಾರಣ ಕಳೆದ 20 ದಿನಗಳಿಂದ ಸಿಎಂ ಸಿದ್ದರಾಮಯ್ಯ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. ಅವರ ಮೊಣಕಾಲಿಗೆ ಬೆಲ್ಟ್ ಹಾಕಲಾಗಿದೆ. ವೈದ್ಯರ ಸಲಹೆಯಂತೆ ಓಡಾಟ ನಿಲ್ಲಿಸಿದ್ದಾರೆ. ಇನ್ನೂ ಆರು ವಾರ ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗಿದ್ದು, ಈ ಬಾರಿ ತಮ್ಮ 16ನೇ ಆಯವ್ಯಯವನ್ನು ಬಹುತೇಕ ಕುಳಿತುಕೊಂಡೇ ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಕಳೆದ ಮೂರು ವಾರದಿಂದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಫೆ.2ರಂದು ಮೊಣಕಾಲು ನೋವಿನ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿದ್ದರು. ಈ ವೇಳೆ ವೈದ್ಯರು ಎರಡು ದಿನಗಳ ಸಂಪೂರ್ಣ ವಿಶ್ರಾಂತಿಗೆ ಸಲಹೆ ನೀಡಿದ್ದರು. ಮೊಣಕಾಲಿನ ನೋವು ಗಂಭೀರ ಸ್ವರೂಪದ್ದಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಬಲ ಕಾಲಿಗೆ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ ಮೊಣಕಾಲು ನೋವು ಉಂಟಾಗಿದೆ. ಬಲ ಮೊಣಕಾಲಿನ ಮೂಳೆ ಕಟ್ಟುಗಳು ಹರಿದಿರುವುದರಿಂದ ನೋವು ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರು ಬಲ ಮೊಣಕಾಲಿಗೆ ಒತ್ತಡ ಹಾಕದಂತೆ ಸಲಹೆ ನೀಡಿದ್ದಾರೆ.
ಹೀಗಾಗಿ ನಡೆದಾಡದಂತೆ ತಮ್ಮ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದು ಮಾಡಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಸುಮಾರು ಆರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಿಎಂಗೆ ಸೂಚನೆ ನೀಡಲಾಗಿದೆ. ಅದರಂತೆ ಫೆ.2ರಿಂದ ಮಾ.15ರ ತನಕ ಸಿಎಂ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಬೇಕಾಗಿದೆ. ಈ ಆರು ವಾರಗಳ ಕಾಲ ಸಿದ್ದರಾಮಯ್ಯನವರು ಹೆಚ್ಚಿಗೆ ನಿಲ್ಲದಂತೆ, ನಡೆದಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮೂರು ವಾರದಿಂದ ವ್ಹೀಲ್ಚೇರ್ನಲ್ಲೇ ಓಡಾಟ:ಕಳೆದ ಮೂರು ವಾರದಿಂದ ಸಿಎಂ ಸಿದ್ದರಾಮಯ್ಯ ಗಾಲಿ ಕುರ್ಚಿಯಲ್ಲೇ ಓಡಾಟ ನಡೆಸುತ್ತಿದ್ದಾರೆ. ವೈದ್ಯರು ಓಡಾಟ ಮಾಡಬಾರದು ಎಂದು ಸೂಚನೆ ನೀಡಿರುವುದರಿಂದ ಇದೀಗ ಬಜೆಟ್ ಪೂರ್ವಭಾವಿ ಸಭೆಗಳಿಗೆ ವ್ಹೀಲ್ಚೇರ್ ಮೂಲಕನೇ ಓಡಾಡುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮ, ಅಧಿಕೃತ ಪ್ರವಾಸಗಳನ್ನೆಲ್ಲ ಮುಂದೂಡಿರುವ ಅವರು ತಮ್ಮ ಕಾವೇರಿ ನಿವಾಸ ಹಾಗೂ ವಿಧಾನಸೌಧದಲ್ಲಿನ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ಮೂರು ವಾರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಹೊರತುಪಡಿಸಿ ಉಳಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ.
ಸಾಮಾನ್ಯವಾಗಿ ಬಜೆಟ್ ಪೂರ್ವಭಾವಿ ಸಭೆಗಳನ್ನು ಶಕ್ತಿ ಭವನದಲ್ಲಿ ನಡೆಸಲಾಗುತ್ತದೆ. ಆದರೆ ಈ ಬಾರಿ ಸಿಎಂ ಸಿದ್ದರಾಮಯ್ಯ ಮೊಣಕಾಲು ನೋವಿನ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆಗಳನ್ನು ತಮ್ಮ ಕಾವೇರಿ ನಿವಾಸದಲ್ಲೇ ನೆರವೇರಿಸಿದ್ದಾರೆ. ಐದು ದಿನಗಳ ಕಾಲ ಕಾವೇರಿ ನಿವಾಸದಲ್ಲೇ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ವಿಶೇಷ ಕುರ್ಚಿಯಲ್ಲಿ ಕೂತೇ ಸಿಎಂ ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸಿದ್ದರು. ಸರಣಿ ಸಭೆಗಳನ್ನು ಪೂರ್ಣವಾಗಿ ವಿಶೇಷ ಕುರ್ಚಿಯಲ್ಲೇ ಕೂತು ಚರ್ಚೆ ನಡೆಸಿದ್ದಾರೆ.