ಕರ್ನಾಟಕ

karnataka

ETV Bharat / state

ಸರ್ಕಾರದ ಅನುದಾನ ಬಳಕೆಯಲ್ಲಿ ವಿಳಂಬ, ಅಧಿಕಾರಿಗಳಿಗೆ ಸಿಎಂ ತರಾಟೆ - CM SIDDARAMAIAH

ಎಲ್ಲಾ ಹೋಬಳಿಗಳಲ್ಲಿ ವಸತಿ ಶಾಲೆಗಳ ಸ್ಥಾಪನೆ ಸರ್ಕಾರದ ಗುರಿಯಾಗಿದೆ. ಎಲ್ಲಾ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಸಿಎಂ ಸಭೆ
ಸಿಎಂ ಸಭೆ (ETV Bharat)

By ETV Bharat Karnataka Team

Published : Jan 7, 2025, 6:29 PM IST

ಬೆಂಗಳೂರು: ಸರ್ಕಾರ ಕೊಟ್ಟ ಅನುದಾನವನ್ನು ವರ್ಷದ ಕೊನೆಯ ತಿಂಗಳಲ್ಲಿ ಖರ್ಚು ಮಾಡುವ ಅಧಿಕಾರಿಗಳ ಅಭ್ಯಾಸದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗೃಹ ಕಚೇರಿ ಕೃಷ್ಣದಲ್ಲಿ ಇಂದು ಎರಡೂವರೆ ಗಂಟೆ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಿಎಂ ಅವರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸ್ಪಷ್ಟ ಸೂಚನೆ ನೀಡಿದರು. ವರ್ಷದ ಕೊನೆ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ. ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಹಂಚಲು ಕೊಟ್ಟ ಹಣವನ್ನು ಖರ್ಚು ಮಾಡದೆ ಇಟ್ಟುಕೊಂಡು ಕೂರುವುದಕ್ಕಾ ನೀವು ಇರುವುದು? ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.

2024-25ನೇ ಸಾಲಿನಲ್ಲಿ ಆಯವ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 5,377 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈವರೆಗೆ 3,631 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಹಣ ಕೂಡ ಪೂರ್ತಿ ಖರ್ಚು ಮಾಡದಿರುವುದನ್ನು ಪ್ರಶ್ನಿಸಿದರು. ಜೊತೆಗೆ ಅಂಬೇಡ್ಕರ್ ನಿಗಮದಲ್ಲಿ ₹900 ಕೋಟಿ, ಭೋವಿ ನಿಗಮದಲ್ಲಿ ₹107 ಕೋಟಿ ಸೇರಿ ಎಲ್ಲಾ ನಿಗಮಗಳಲ್ಲಿ ನೂರಾರು ಕೋಟಿ ಹಣ ಇದ್ದರೂ ಖರ್ಚು ಮಾಡದ ನಿಗಮದ ಎಂಡಿಗಳಿಗೆ ನೋಟಿಸ್ ನೀಡಿ, ಅಗತ್ಯ ಬಿದ್ದರೆ ಸಸ್ಪೆಂಡ್ ಮಾಡುವಂತೆ ಖಡಕ್ ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರದಿಂದ ಕೊಟ್ಟ ಹಣದಲ್ಲಿ 2,892 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಉಳಿದದ್ದು ಹಾಗೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮಾರ್ಚ್‌ ಅಂತ್ಯದವರೆಗೆ ಕಾಯದೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿ ವೇತನ ಪಾವತಿಯನ್ನು ವರ್ಷದ ಅಂತ್ಯದವರೆಗೆ ಬಾಕಿ ಉಳಿಸಬಾರದು. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ಸೆಪ್ಟಂಬರ್‌ ಒಳಗಾಗಿ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನವನ್ನು ನವೆಂಬರ್‌ ಅಂತ್ಯದ ಒಳಗಾಗಿ ಪಾವತಿಗೆ ಕ್ರಮ ಕೈಗೊಳ್ಳಬೇಕು. ಆಧಾರ್‌ ಆಗದಿರುವ ಕಾರಣಕ್ಕೆ ವಿದ್ಯಾರ್ಥಿ ವೇತನದಲ್ಲಿ ವಿಳಂಬವಾಗಬಾರದು. ಎಲ್ಲಾ ವಿದ್ಯಾರ್ಥಿಗಳಿಗೆ ಆಧಾರ್‌ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಎಲ್ಲಾ ಹೋಬಳಿಗಳಲ್ಲಿ ವಸತಿ ಶಾಲೆ: ಎಲ್ಲಾ ಹೋಬಳಿಗಳಲ್ಲಿ ವಸತಿ ಶಾಲೆಗಳ ಸ್ಥಾಪನೆ ಸರ್ಕಾರದ ಗುರಿಯಾಗಿದೆ. ಈ ವರ್ಷ 20 ಹೊಸ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 841 ವಸತಿ ಶಾಲೆಗಳು ಇವೆ. ಇನ್ನು 92 ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಿಸಬೇಕಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು. ಹೊಸದಾಗಿ ಆರಂಭಿಸಲಾಗಿರುವ ಎಲ್ಲಾ 20 ವಸತಿ ಶಾಲೆಗಳಲ್ಲಿ ಶಿಕ್ಷಕರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸೂಚಿಸಿದರು.

ಎಲ್ಲಾ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಶಿಕ್ಷಕರಿಗೆ ನಿರಂತರ ತರಬೇತಿ ನೀಡಬೇಕು. ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಪ್ರಸ್ತುತ ರಾಜ್ಯದಲ್ಲಿ 70 ಪಿಯು ವಸತಿ ಶಾಲೆಗಳಿದ್ದು, ಪ್ರತಿ ತಾಲೂಕು ಮಟ್ಟದಲ್ಲಿ ಕನಿಷ್ಠ ಒಂದು ಪಿಯು ವಸತಿ ಶಾಲೆ ಆರಂಭಿಸಬೇಕು. ಎಲ್ಲಾ ವಸತಿ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಬೇಕು. ಸ್ಥಳಾವಕಾಶ ಇದ್ದ ಕಡೆ ಕ್ರೀಡಾಂಗಣ ನಿರ್ಮಿಸಲು ಕ್ರಮವಹಿಸಿ. 841 ವಸತಿ ಶಾಲೆಗಳ ಪೈಕಿ 640 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿದ್ದು, 90 ನಿರ್ಮಾಣ ಹಂತದಲ್ಲಿವೆ. ವಸತಿ ಶಾಲೆ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಯನ್ನು ಆದ್ಯತೆ ಮೇರೆಗೆ ನೀಡಲು ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಎಲ್ಲಾ ವಸತಿ ಶಾಲೆಗಳಲ್ಲಿ ಊಟದ ಗುಣಮಟ್ಟ ಕಾಯ್ದುಕೊಳ್ಳಬೇಕು. ಹಾಸಿಗೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳ ಆರೋಗ್ಯ, ಪೌಷ್ಟಿಕಾಂಶಗಳ ತಪಾಸಣೆ ನಿಯಮಿತವಾಗಿ ನಡೆಸಬೇಕು. ರಾಜ್ಯದಲ್ಲಿ 1937 ವಿದ್ಯಾರ್ಥಿ ನಿಲಯಗಳಿವೆ. 270 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದು, 130 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. 63 ಕಡೆ ನಿವೇಶನಗಳು ಲಭ್ಯವಿದ್ದು, ಇಲ್ಲಿಯೂ ಸ್ವಂತ ಕಟ್ಟಡ ಕಟ್ಟಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನಿಗಮಗಳಿಗೆ ಬಜೆಟ್‌ನಲ್ಲಿ ಈ ವರ್ಷ 446 ಕೋಟಿ ಒದಗಿಸಲಾಗಿದ್ದು, ಈವರೆಗೆ 260 ಕೋಟಿ ರೂ. ವೆಚ್ಚ ಮಾಡಲಾಗಿದೆ. ನಿಗಮಗಳು ನಿಗದಿತ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಖರ್ಚು ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ನಿಗಮಗಳಲ್ಲಿ ಹಿಂದಿನ ವರ್ಷದ ಬಾಕಿ ಹಾಗೂ ಪ್ರಸ್ತುತ ವರ್ಷದ ಭೌತಿಕ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಮಾರ್ಚ್ 1 ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ

ಇದನ್ನೂ ಓದಿ: ಕೆಎಸ್​​ಆರ್​​ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್: ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಗೆ ಸಿಎಂ ಚಾಲನೆ

ABOUT THE AUTHOR

...view details