ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪಾಲರ ವಿಶೇಷ ಕಾರ್ಯದರ್ಶಿ, ದೂರುದಾರರಾದ ಟಿ.ಜೆ. ಅಬ್ರಾಹಂ, ಸ್ಬೇಹಮಯಿ ಕೃಷ್ಣ, ಎಸ್ಪಿ ಪ್ರದೀಪ್ ಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತಂತೆ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಪ್ರಸ್ಥಾಪಿಸಿದರು. ಅಲ್ಲದೆ, ವಿಷಯ ಗಂಭೀರವಾಗಿದೆ.ಪ್ರಕರಣ ಸಬಂಧ ಕೇವಿಯಟ್ ಸಲ್ಲಿಸಿದವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ರಾಜ್ಯಪಾಲರ ಕಚೇರಿಗೂ ಅರ್ಜಿಯ ಪ್ರತಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.ಮುಖ್ಯಮಂತ್ರಿ ಸಿದ್ದರಾಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ತಿಳಿಸಿದೆ.
ಆರ್ ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೂರ್ವಾನುಮತಿ ನೀಡಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ.
ಇದೇ ವೇಳೆ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡುವಂತೆ ಟಿ.ಜೆ.ಅಬ್ರಹಾಂ ಹಾಗೂ ಸ್ನೇಹಮಯಿ ಕೃಷ್ಣಾಗೆ ರಾಜಭವನದಿಂದ ಬುಲಾವ್ ನೀಡಲಾಗಿದೆ.
ಸಿ.ಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಜುಲೈ 26ರಂದು ಟಿ.ಜೆ. ಅಬ್ರಹಾಂ ಅವರು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯಪಾಲರು ಮುಖ್ಯಮಂತ್ರಿಗೆ ನೋಟಿಸ್ ನೀಡಿದ್ದರು.
ಅರ್ಜಿಯಲ್ಲಿ ಏನಿದೆ?: 2024ರ ಜುಲೈ 26 ರಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ (ಪಿಸಿ ಆ್ಯಕ್ಟ್) 17ಎ, 19 ಮತ್ತು ಭಾರತೀಯ ನ್ಯಾಯಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಸೆಕ್ಷನ್ 218ರ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಅದೇ ದಿನ ರಾಜ್ಯಪಾಲರು ಕಾನೂನು ಮತ್ತು ಸಂವಿಧಾನಾತ್ಮಕ ಅಂಶಗಳನ್ನು ಪರಿಗಣಿಸದೆ ವಿವೇಚನಾ ರಹಿತವಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಇದಕ್ಕೆ ಮುಖ್ಯಮಂತ್ರಿಗಳು ವಿವರವಾದ ಪ್ರತಿಕ್ರಿಯೆ ನೀಡಿದ್ದರು. ಜತೆಗೆ, ಸಂಪುಟದ ಸಲಹೆ ಹೊರತಾಗಿಯು ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆಗಸ್ಟ್ 16 ರಂದು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳ ವಿವರವಾದ ಪ್ರತಿಕ್ರಿಯೆಯಲ್ಲಿ ಕಾನೂನು ಮತ್ತು ವಾಸ್ತವಿಕತೆಗಳನ್ನು ಸ್ಪಷ್ಟವಾಗಿ ವಿವರಿಸಿದ್ದರ, ಅವುಗಳನ್ನು ಪರಿಗಣಿಸದೆ ಅನುಮತಿ ನೀಡಲಾಗಿದೆ. ರಾಜ್ಯಪಾಲರ ಈ ನಡೆ ಸ್ಪಷ್ಟವಾಗಿ ಸ್ವಾಭಾವಿಕ ನ್ಯಾಯದ ಉಲ್ಲಂಘನೆ ಆಗಿದೆ. ವಿವೇಚನಾ ರಹಿತವಾಗಿದ್ದು, ಪಿಸಿ ಕಾಯಿದೆಯ ಸೆಕ್ಷನ್ 17ಎ ಮತ್ತು 19ರ ಬಿಎನ್ಎಸ್ಎಸ್ ಸೆಕ್ಷನ 218ರ ನಿಬಂಧನೆಗಳಿಗೆ ವಿರುದ್ಧವಾಗಿದೆ.
ರಾಜ್ಯಪಾಲರು ಮುಖ್ಯಮಂತ್ರಿಗಳ ನೀಡಿದ್ದ ಪ್ರತಿಕ್ರಿಯೆನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದೊಂದು ವಿವೇಚನಾ ರಹಿತ ಮತ್ತು ಆತುರದ ಹಾಗೂ ಅಸಾಂವಿಧಾನಿಕ ನಿರ್ಧಾರವಾಗಿದೆ. ಹೀಗಾಗಿ, ಈ ಆದೇಶವನ್ನು ಅಗತ್ಯ ದಾಖಲೆಗಳ ಪರಿಗಣಿಸದೆ ಹೊರಡಿಸಿದ್ದು, ರದ್ದುಮಾಡಬೇಕು. ಅಲ್ಲದೆ, ಈ ಆದೇಶಕ್ಕೆ ಮಧ್ಯಂತರ ಪರಿಹಾರ ನೀಡದಿದ್ದಲ್ಲಿ ಅರ್ಜಿದಾರರ ಘನತೆಗೆ ಸರಿಪಡಿಸಲಾಗದ ಹಾನಿಯಾಗಲಿದೆ. ಜತೆಗೆ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯನಿರ್ವಹಣೆಗೂ ತೊಡಕಾಗಲಿದೆ. ಹೀಗಾಗಿ ರಾಜ್ಯಪಾಲರ ಆದೇಶವನ್ನು ಕಾರ್ಯರೂಪಕ್ಕೆ ತರುವುದಕ್ಕೆ ತಡೆ ನೀಡಬೇಕು ಎಂದು ಮಧ್ಯಂತರ ಪರಿಹಾರವನ್ನು ಕೋರಿದ್ದಾರೆ.
ಇದನ್ನೂ ಓದಿ:ಸಿಎಂ ರಾಜೀನಾಮೆಗೆ ಆಗ್ರಹ: ಪಾದಯಾತ್ರೆ ಬಳಿಕ 2ನೇ ಹಂತದ ಹೋರಾಟಕ್ಕೆ ಬಿಜೆಪಿ ಸಜ್ಜು - BJP Protest