ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಸಮೀಪ ಕಾವೇರಿ ನದಿಯಿಂದ ಕೆರೆ, ಕಟ್ಟೆಗಳಿಗೆ ನೀರೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡುವಾಗ ಬಟನ್ ಕೆಲಸ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾದ ಸನ್ನಿವೇಶ ಬುಧವಾರ ನಡೆಯಿತು. ಈ ಘಟನೆಯ ಹಿನ್ನೆಲೆಯಲ್ಲಿ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶ್ರೀಧರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಅಮಾನತುಗೊಳಿಸಿದೆ.
ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆ, ಕಟ್ಟೆಗಳಿಗೆ ತುಂಬಿಸುವ ಯೋಜನೆಯ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮಿಸಿ, ಉದ್ಘಾಟನೆ ಕಾರ್ಯ ನೆರವೇರಿಸುತ್ತಿದ್ದರು. ಬೃಹತ್ ಸಾರ್ವಜನಿಕ ಯೋಜನೆಯ ಲೋಕಾರ್ಪಣೆಗಾಗಿ ವಿಧ್ಯುಕ್ತವಾಗಿ ಬಟನ್ ಒತ್ತುವ ಮೂಲಕ ಚಾಲನೆ ನೀಡುವಾಗ ಅದು ಚಾಲನೆಯಾಗಲಿಲ್ಲ. ಇದರಿಂದ ಮುಖ್ಯಮಂತ್ರಿ ತೀವ್ರ ಮುಜುಗರ ಅನುಭವಿಸಿದರು.
ಸಿಎಂ ಭಾಗವಹಿಸುವ ಕಾರ್ಯಕ್ರಮದ ಸ್ಥಳಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ವಹಿಸಲು ಚೆಸ್ಕಾಂ ಎಂಡಿ ಸಿ.ಎನ್.ಶ್ರೀಧರ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನದ ಆದೇಶದಲ್ಲಿ ಸೂಚನೆ ನೀಡಿದ್ದರು. ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಖುದ್ದು ಹಾಜರಿದ್ದು, ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ವ್ಯವಸ್ಥಿತವಾಗಿ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಹಕರಿಸದೇ ಕರ್ತವ್ಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷ್ಯತನ ತೋರಿಸಿದ್ದಾರೆ. ಈ ಮೂಲಕ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದಾರೆ. ಹಾಗಾಗಿ, ಈ ಸನ್ನಿವೇಶ ಸೃಷ್ಟಿಯಾಗಲು ಅವರು ನೇರ ಕಾರಣಕರ್ತರು ಎಂದು ಅಮಾನತು ಆದೇಶದಲ್ಲಿ ಕಾರಣಗಳನ್ನು ಉಲ್ಲೇಖಿಸಲಾಗಿದೆ.