ಮೈಸೂರು:''ವಿಧಾನಸಭಾ ಚುನಾವಮೆಯಲ್ಲಿ ನನ್ನನ್ನು 48,000 ಸಾವಿರ ಮತಗಳ ಲೀಡ್ನಿಂದ ಗೆಲ್ಲಿಸಿದ್ದೀರಾ, ಈಗ ಅದಕ್ಕಿಂತಲೂ ಜಾಸ್ತಿ 60 ಸಾವಿರ ಲೀಡ್‌ನಲ್ಲಿ ಸುನೀಲ್ ಬೋಸ್ ಅವರನ್ನು ಗೆಲ್ಲಿಸಿ. ವರುಣಾ ಕ್ಷೇತ್ರದಿಂದ 60 ಸಾವಿರ ಲೀಡ್ ಬರಬೇಕು ಅಲ್ವಾ?. ನೀವೆಲ್ಲ 60 ಸಾವಿರ ಲೀಡ್ ಬರುವಂತೆ ಮಾಡಿದರೆ ನನಗೆ ಸಂತಸವಾಗುತ್ತದೆ, ಆಗ ನನ್ನನ್ನು ಯಾರೂ ಕೂಡ ಮುಟ್ಟೋಕೆ ಆಗಲ್ಲ. ನಾನು ಸಿಎಂ ಆಗಿ ಇರಬೇಕೋ, ಬೇಡ್ವೋ''? ಎಂದು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಸಿಎಂ ಸಿದ್ದರಾಮಯ್ಯ ಮತಬೇಟೆ ನಡೆಸಿದರು.
ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ಇಂದು ಆಯೋಜಿಸಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದ ಸಿಎಂ, "ಸುನೀಲ್ ಬೋಸ್ ಅವರನ್ನು ಗೆಲ್ಲಿಸಿ, ಬಿಜೆಪಿಯ ಸುಳ್ಳುಗಳನ್ನು ಸೋಲಿಸಿ" ಎಂದು ಮತದಾರರಲ್ಲಿ ಮನವಿ ಮಾಡಿದರು.
"ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ಇಲ್ಲಿನ ಜನರಿಂದ ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ಈಗಲೂ ನನಗೆ ಮತ ನೀಡುತ್ತಿರುವುದೆಂದು ಭಾವಿಸಿ ನಮ್ಮ ಅಭ್ಯರ್ಥಿಗೆ ಮತ ನೀಡಿ. ಮೈಸೂರು, ಚಾಮರಾಜನಗರ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ನಾನು ಇನ್ನಷ್ಟು ಗಟ್ಟಿಯಾಗಿ, ನನ್ನ ರಾಜಕೀಯ ಶಕ್ತಿಯೂ ಹೆಚ್ಚುತ್ತದೆ. ಇದಕ್ಕೆ ನೀವೆಲ್ಲರೂ ಬೆಂಬಲಿಸಬೇಕು" ಎಂದು ವಿನಂತಿಸಿದರು.
"ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಆರ್ಥಿಕ ಸಾಮರ್ಥ್ಯ ಹೆಚ್ಚಿದೆ. ದುಡಿಯುವ ಅವಕಾಶವೂ ಹೆಚ್ಚಿದೆ. ಪುರುಷರ ಜೇಬಿಗೆ ಹಣ ಉಳಿತಾಯವಾಗಿದೆ. ಜನಸಾಮಾನ್ಯರ ಜೇಬಿಗೆ ಹಣ ಹಾಕಿ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರೂ, ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರಾ?. ದೇಶದ ಜನರಿಗಾಗಿ ಏನೂ ಕಾರ್ಯಕ್ರಮ ರೂಪಿಸದೆ ಕೇವಲ ಅಚ್ಛೇ ದಿನ್ ಆಯೆಗಾ ಎಂದು ಡೈಲಾಗ್ ಹೊಡೆದರೆ ಸಾಕಾ?. ಡೈಲಾಗ್‌ನಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ, ರಸಗೊಬ್ಬರ ಬೆಲೆ ಕಡಿಮೆ ಆಗುತ್ತಾ?. ಬರೀ ಬಾಯಲ್ಲಿ ಡೈಲಾಗ್ ಹೊಡೆದರೆ ಜನರ ಬದುಕಿನ ಸಂಕಷ್ಟ ಕಡಿಮೆ ಆಗುತ್ತದಾ" ಎಂದು ಪ್ರಶ್ನಿಸಿದರು.