ಮಂಡ್ಯ: ಲೋಕಸಭಾ ಚುನಾವಣೆಗೆ ಮತದಾನ ಸಮೀಪಿಸುತ್ತಿದೆ. ಮಂಡ್ಯದಲ್ಲಿ ಚುನಾವಣೆಯ ಕಾವು ಏರತೊಡಗಿದೆ. ಈ ಬಾರಿ ಗೆಲುವು ಸಾಧಿಸಲೇಬೇಕೆಂದು ಪಣ ತೊಟ್ಟಿರುವ ಸಿಎಂ ಹಾಗೂ ಡಿಸಿಎಂ ತಮ್ಮ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಪರ ಶನಿವಾರ ಮತ ಪ್ರಚಾರ ನಡೆಸಿದರು.
ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಕಾಂಗ್ರೆಸ್ ಗ್ಯಾರಂಟಿಗಳು ಎಲ್ಲಾ ವರ್ಗ, ಪಕ್ಷಗಳ ಜನರಿಗೂ ತಲುಪಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾಯ್ತು. ಅವರು ಕೊಟ್ಟ ಮಾತುಗಳಲ್ಲಿ ಒಂದನ್ನೂ ಉಳಿಸಿಕೊಳ್ಳಲಿಲ್ಲ. ಎಲ್ಲರ ಬದುಕನ್ನು ಹಸನು ಮಾಡುತ್ತೇವೆಂದು ಹೇಳಿದ್ದರು. ಬರೀ ಸುಳ್ಳು ಹೇಳಿಕೊಂಡು ಧರ್ಮಗಳ ನಡುವೆ ಕಿಚ್ಚು ಹಚ್ಚಿದರು. ಯಾರೂ ಇವರನ್ನು ನಂಬಬೇಡಿ. ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಕೊನೇ ದಿನ ಸಮಾವೇಶ ಇಟ್ಟುಕೊಂಡಿದ್ದಾರೆ. ಆ ದಿನ ಕಣ್ಣೀರು ಹಾಕುವುದು ಅದರ ಉದ್ದೇಶ. ದಯಮಾಡಿ ಸ್ಟಾರ್ ಚಂದ್ರು ಬೆಂಬಲಿಸಿ ಗೆಲ್ಲಿಸಿ" ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಜೆಡಿಎಸ್ ಪಕ್ಷ ಇರೋದು ರಾಜ್ಯದ ಅಭಿವೃದ್ಧಿಗಲ್ಲ. ಕಾರ್ಯಕರ್ತರ ಉದ್ಧಾರಕ್ಕಲ್ಲ. ಕೇವಲ ಅವರ ಕುಟುಂಬಕ್ಕಾಗಿ ಇದೆ. ಮಂಡ್ಯ ಜಿಲ್ಲೆಯನ್ನು ತಮ್ಮ ಜಿಲ್ಲೆ ಅಂತಾರೆ. ಈ ಜಿಲ್ಲೆಗೆ ಅವರ ಕೊಡುಗೆ ಏನು?" ಎಂದು ವಾಗ್ದಾಳಿ ನಡೆಸಿದರು.