ಬೆಂಗಳೂರು: ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚನೆ ಆರೋಪ ಸಂಬಂಧ ಇಡ್ಲಿಗುರು ಹೋಟೆಲ್ ಸಂಸ್ಥಾಪಕ ಕಾರ್ತಿಕ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಪೊಲೀಸರು ತಮ್ಮನ್ನ ಬಂಧಿಸಿಲ್ಲ ಎಂದು ಹೇಳಿದ್ದಾರೆ. ಬದಲಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ಕೊಟ್ಟಿದ್ದರು ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.
ಹೋಟೆಲ್ಗೆ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ತಮಗೆ ಐದು ಲಕ್ಷ ಹಣ ವಂಚಿಸಿದ್ದಾರೆ ಎಂದು ಆರೋಪಿಸಿ ಚೇತನ್ ಎಂಬುವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸತ್ಯಾಸತ್ಯತೆ ಅರಿಯಲು ಸಿಆರ್ಪಿಸಿ 41 (ಎ) ನಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಅದರಂತೆ ಫೆಬ್ರುವರಿ 15 ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ. ಮಾಧ್ಯಮಗಳಲ್ಲಿ ಬಂಧಿತರಾಗಿರುವ ಬಗ್ಗೆ ಸುದ್ದಿ ಬಂದಿದೆ. ಹೀಗಾಗಿ ನಡೆದ ವಿಷಯದ ಬಗ್ಗೆ ತಿಳಿಸಿದ್ದೇನೆ ಎಂದು ಕಾರ್ತಿಕ್ ಶೆಟ್ಟಿ ಹೇಳಿದ್ದಾರೆ.
''ಮುಂಬೈನಲ್ಲಿ ಇಡ್ಲಿಗುರು ಹೋಟೆಲ್ನ ವಿವಿಧ ಶಾಖೆಗಳಿವೆ. ವ್ಯವಹಾರಿಕ ದೃಷ್ಟಿಯಿಂದ ಆಗಾಗ್ಗೆ ಮುಂಬೈಗೆ ಹೋಗಿ ಬರುತ್ತೇನೆ. ಅದೇ ರೀತಿ ಫೆ.14ರಂದು ಮುಂಬೈನಲ್ಲಿದ್ದೆ. ಚೇತನ್ ಎಂಬುವರು ದೂರು ನೀಡಿರುವ ಬಗ್ಗೆ ಗೊತ್ತಿರಲಿಲ್ಲ. ಬಳಿಕ ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಮಾತ್ರವೇ ವಿಷಯ ಗೊತ್ತಾಯಿತು. ನಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದೇನೆ'' ಎಂದರು.