ಬೆಳಗಾವಿ: ಮುಂಜಾವಿನಲ್ಲಿ ಎದ್ದು ನಗರದ ಕಸ ಗುಡಿಸಿ ಸ್ವಚ್ಛ ಮಾಡುವವರು ಪೌರಕಾರ್ಮಿಕರು. ಅಂತಹ ಪೌರ ಕಾರ್ಮಿಕ ಕಾಯಕದ ಜೊತೆ ಜೊತೆಗೆ ಇಲ್ಲೊಬ್ಬ ಕಲಾವಿದ ಚಿತ್ರ ಬಿಡಿಸುವ ಮೂಲಕ ದಾರಿ ಹೋಕರ ಗಮನ ಸೆಳೆಯುತ್ತಿದ್ದಾರೆ. ಇವರು ಚಿತ್ರ ಬಿಡಿಸಲು ಸೈ, ನಗರದ ಸ್ವಚ್ಛತೆಗೂ ಜೈ ಎನಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಪೌರಕಾರ್ಮಿಕನಾಗಿರುವ ಇವರಿಗೆ ಚಿತ್ರಗಳನ್ನು ಬಿಡಿಸುವುದು ಹವ್ಯಾಸ. ಈ ಪೌರ - ಕಲಾವಿದ ಬಿಡಿಸಿದ ಚಿತ್ರಗಳು ಕುಂದಾನಗರಿಯಲ್ಲಿ ಕಣ್ಮನ ಸೆಳೆಯುತ್ತಿವೆ. ಹೀಗೆ ಕೈಯಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸುತ್ತಿರುವ ವ್ಯಕ್ತಿ ರಾಜು ಕೋಲಕಾರ.
ಸದ್ಯ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಕುಂದಾನಗರಿ ಶೃಂಗಾರಗೊಳ್ಳುತ್ತಿದೆ. ಅಧಿವೇಶನಕ್ಕೆ ಮುಖ್ಯಮಂತ್ರಿ, ಸಚಿವರು, ಶಾಸಕರು ಸಂಚರಿಸುವ ಮುಖ್ಯರಸ್ತೆಗಳ ಆವರಣದ ಗೋಡೆಗಳ ಮೇಲೆ ಕಲಾವಿದರು ಆಕರ್ಷಕ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಇದರಲ್ಲಿ ಪೌರಕಾರ್ಮಿಕ ರಾಜು ಕೋಲಕಾರ ಕೂಡ ಚಿತ್ರಗಳನ್ನು ಬಿಡಿಸುತ್ತಿರುವುದು ವಿಶೇಷ.
ರಾಜು ಅವರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇರ ವೇತನದಡಿ 10 ವರ್ಷಗಳಿಂದ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಕಲಾ ವಿಭಾಗದಲ್ಲಿ ಪಿಯುಸಿ ಪೂರ್ಣಗೊಳಿಸಿರುವ ರಾಜು, ಬಾಲ್ಯದಿಂದ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಬಾಲ್ಯದಿಂದಲೇ ಒಲಿದು ಬಂದ ಚಿತ್ರಕಲೆ: ಅಶೋಕ ನಗರದ ಬಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಕೆಳಗೆ 'ಹೂವಿನ' ಚಿತ್ರ ಬಿಡಿಸುವಲ್ಲಿ ನಿರತರಾಗಿದ್ದ ರಾಜು ಈಟಿವಿ ಭಾರತ ಜೊತೆಗೆ ಮಾತನಾಡಿ, "ಚಿಕ್ಕಂದಿನಿಂದ ಚಿತ್ರ ಬಿಡಿಸುತ್ತಿದ್ದೇನೆ. ವರ್ಲಿ ಚಿತ್ರಗಳಲ್ಲಿ ಹೆಚ್ಚು ಆಸಕ್ತಿಯಿದೆ. ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಗೋಡೆ ಮೇಲೆ ಚಿತ್ರ ಬಿಡಿಸುತ್ತಿದ್ದೇನೆ. ಅಗತ್ಯ ಇರುವ ಬಣ್ಣ, ಬ್ರೇಶ್ ಸೇರಿ ಎಲ್ಲ ಪರಿಕರಗಳನ್ನು ಪಾಲಿಕೆಯಿಂದ ಒದಗಿಸಲಾಗಿದೆ. ಈ ವೃತ್ತಿ ನನಗೆ ತುಂಬಾ ಖುಷಿ ಕೊಡುತ್ತದೆ. ಜನರು ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ" ಎಂದರು.
ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕಿ ರುಕ್ಸಾರ ಮುಲ್ಲಾ ಮಾತನಾಡಿ, "ರಾಜು ಕೋಲಕಾರ ಸುಂದರವಾಗಿ ಚಿತ್ರ ಬಿಡಿಸುತ್ತಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ತಮ್ಮನ್ನು ತಾವು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಬಣ್ಣ ಕೊಡುವುದು ಒಂದು ವೇಳೆ ತಡವಾದರೆ ಸ್ವಂತ ದುಡ್ಡಿನಲ್ಲಿ ತಂದು ಕೆಲಸ ಮಾಡುತ್ತಾರೆ. ನಿಜಕ್ಕೂ ಇವರ ಪ್ರಾಮಾಣಿಕ ಕಾಯಕ ನೋಡಿ ತುಂಬಾ ಖುಷಿಯಾಗುತ್ತದೆ" ಎಂದರು.
ಅ.2ರಂದು ಮಹಾತ್ಮಾ ಗಾಂಧೀಜಿ ಜಯಂತಿ ನಿಮಿತ್ತ ತ್ಯಾಜ್ಯ ಸಂಗ್ರಹ ವಸ್ತುಗಳ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಟೈಯರ್ ಮೇಲೆ ಬಣ್ಣ ಬಳಿದು ಗೊಂಬೆಗಳ ಚಿತ್ರ ಬಿಡಿಸಿದ್ದರು. ಪ್ಲಾಸ್ಟಿಕ್ ಬಾಟಲಿ, ಪೇಪರ್ ಕಪ್ಗಳಿಂದ ಸುಂದರ ಮನೆ ಮಾದರಿ ತಯಾರಿಸಿದ್ದಕ್ಕೆ ಪ್ರಥಮ ಬಹುಮಾನ ಬಂದಿತ್ತು. ಇನ್ನು ನಗರದಲ್ಲಿ ಎಲ್ಲೆಲ್ಲಿ ಸಾರ್ವಜನಿಕರು ಕಸ ಚೆಲ್ಲುತ್ತಾರೋ ಅಲ್ಲೆಲ್ಲಾ ಚಿತ್ರ ಬಿಡಿಸುವ ರಾಜು ಕೋಲಕಾರ, ನ್ಯೂ ಗಾಂಧಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.