ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಸರಿಯಾದ ಮೂಲ ಸೌಕರ್ಯ, ಉತ್ತಮ ಚಿಕಿತ್ಸೆ ಲಭ್ಯವಿಲ್ಲ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಿರುತ್ತವೆ. ಆದರೆ ಹುಬ್ಬಳ್ಳಿಯ ಮಹಾನಗರ ಪಾಲಿಕೆಯಡಿ ಕಾರ್ಯನಿರ್ವಹಿಸುವ ಚಿಟಗುಪ್ಪಿ ಆಸ್ಪತ್ರೆ ಇದಕ್ಕೆ ಅಪವಾದ. ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದರಿಂದಾಗಿ, ಈ ಆಸ್ಪತ್ರೆ ಬಡ ರೋಗಿಗಳ ಪಾಲಿನ ಸಂಜೀವಿನಿಯಾಗಿದೆ.
ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ವೈದ್ಯಕೀಯ ತಂಡ ಕೆಲವು ದಿನಗಳ ಹಿಂದೆ ಮೂವರು ಮಹಿಳೆಯರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ ಮೂವರಲ್ಲಿ ಒಬ್ಬರಾದ ಹುಬ್ಬಳ್ಳಿಯ ನಾಗಲಿಂಗ ನಗರದ ನಿವಾಸಿ ವಿಜಯಲಕ್ಷ್ಮಿ ಕುಲಕರ್ಣಿ(68) ಎಂಬವರು ಒಂದು ವರ್ಷದಿಂದ ಸ್ತನ ಕ್ಯಾನ್ಸರ್ಗೆ (ಬ್ರೆಸ್ಟ್ ಕ್ಯಾನ್ಸರ್) ತುತ್ತಾಗಿ ಸಮಸ್ಯೆ ಎದುರಿಸುತ್ತಿದ್ದರು. ಇತ್ತೀಚೆಗೆ ಚಿಟಗುಪ್ಪಿ ಆಸ್ಪತ್ರೆಗೆ ಬಂದು ತಮ್ಮ ಸಮಸ್ಯೆ ಬಗ್ಗೆ ಕೇಳಿಕೊಂಡಾಗ ವೈದ್ಯರು ತುರ್ತು ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುವುದನ್ನು ಮನಗಂಡು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು. ಬಳಿಕ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ, ವೈದ್ಯರಾದ ಡಾ.ಚನ್ನಬಸಪ್ಪ ಕೋರಿ, ಡಾ. ಸಂಜೀವ್ ಅವರ ಸಹಕಾರದಿಂದ ವಿಜಯಲಕ್ಷ್ಮಿ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದರು.
ಇದಲ್ಲದೇ, ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ 1.8 ಕೆ.ಜಿಯ ಟ್ಯೂಮರ್ ಹೊರತೆಗೆಯಲಾಗಿತ್ತು. ಎಂಡೋಮೆಟಿಲ್ ಕ್ರಾಸ್ಟಿಮೋಗೆ ತುತ್ತಾಗಿದ್ದ ಮಹಿಳಾ ರೋಗಿಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಇದೀಗ ಮೂವರು ರೋಗಿಗಳೂ ಗುಣಮುಖರಾಗಿದ್ದಾರೆ.
ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ನಮ್ಮ ಆಸ್ಪತ್ರೆ ಸತತವಾಗಿ ವಿಭಿನ್ನ ಪ್ರಕರಣಗಳಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಪ್ರಮುಖವಾಗಿ ಲ್ಯಾಪೋಸ್ಕೋಪಿ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಮಹಿಳೆಯರಿಗೆ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಈ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳು ಇದರ ಲಾಭ ಪಡೆಯಬೇಕು" ಎಂದು ಮನವಿ ಮಾಡಿದರು.
ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿರುವ ವಿಜಯಲಕ್ಷ್ಮಿ ಕುಲಕರ್ಣಿ ಪ್ರತಿಕ್ರಿಯಿಸಿ, "ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಉತ್ತಮ ಚಿಕಿತ್ಸೆ ಕೊಟ್ಟು ನನಗೆ ಪುನರ್ಜನ್ಮ ನೀಡಿದ್ದಾರೆ. ಇದೀಗ ಆರೋಗ್ಯವಾಗಿದ್ದೇನೆ. ವೈದ್ಯರಿಗೆ ಧನ್ಯವಾದ ತಿಳಿಸುತ್ತೇನೆ" ಎಂದರು.
ಇದನ್ನೂ ಓದಿ: ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಸಹಿತ ಚೈನ್ ಹೊರ ತೆಗೆದ ಸರಕಾರಿ ವೆನ್ಲಾಕ್ ಆಸ್ಪತ್ರೆ
ಇದನ್ನೂ ಓದಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಗಾಯಗೊಂಡಿದ್ದ ಬಾಲಕನ ತಲೆಗೆ ಹೊಲಿಗೆ ಹಾಕಿದ ಸರ್ಕಾರಿ ಆಸ್ಪತ್ರೆ ವೈದ್ಯರು