ಕರ್ನಾಟಕ

karnataka

ETV Bharat / state

ದಾವಣಗೆರೆ: ಮರೆಯಾಗುತ್ತಿವೆ ಸಿನಿ ಮಂದಿರಗಳು, ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಿಗೆ ಬೀಗ - CINEMA THEATRE CLOSED

ದಾವಣಗೆರೆ ನಗರದಲ್ಲಿ ಕಲಾವಿದರ ಕೈ ಹಿಡಿದು ಪೋಷಿಸಿ ಬೆಳೆಸಿದ್ದ ಸಿನಿಮಾ ಮಂದಿರಗಳು ಇಂದು ಇತಿಹಾಸದ ಪುಟ ಸೇರುತ್ತಿವೆ. ಈ ಕುರಿತು ಈಟಿವಿ ಭಾರತ ಕನ್ನಡ ಪ್ರತಿನಿಧಿ ನೂರ್​ ಮಾಡಿರುವ ವಿಶೇಷ ವರದಿ ಇಲ್ಲಿದೆ.

cinema-theatre-closed
ಸಿನಿ ಮಂದಿರಕ್ಕೆ ಬೀಗ (ETV Bharat)

By ETV Bharat Karnataka Team

Published : Nov 16, 2024, 9:07 PM IST

ದಾವಣಗೆರೆ :ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ಇಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾದರೂ ಸುತ್ತಮುತ್ತ ಜಿಲ್ಲೆಯ ಸಿನಿ ರಸಿಕರು ಸಿನಿಮಾ ವೀಕ್ಷಿಸಲು ದಾವಣಗೆರೆಗೆ ಬರುವ ಕಾಲ ಅದು. 90 ರ‌ ದಶಕದಲ್ಲಿ ಕಲಾವಿದರ ಕೈ ಹಿಡಿದು ಪೋಷಿಸಿ ಬೆಳೆಸಿದ್ದು ಇದೇ ದಾವಣಗೆರೆಯ ಸಿನಿಮಾ ಮಂದಿರಗಳು. ಬಹುಕಾಲ ಸಿನಿ ರಸಿಕರಿಗೆ ಕನ್ನಡ ಸಿನಿಮಾಗಳ ಮುಖೇನ ರಸದೌತಣ ಉಣಬಡಿಸಿದ್ದ ಬಹುತೇಕ ಥಿಯೇಟರ್​ಗಳು ಇಂದು ಇತಿಹಾಸದ ಪುಟ ಸೇರುತ್ತಿವೆ.

ದಾವಣಗೆರೆ ನಗರದಲ್ಲಿ ಸಿಂಗಲ್ ಸ್ಕ್ರೀನ್ ಹೊಂದಿದ್ದ ಥಿಯೇಟರ್‌ಗಳ ಆಯಸ್ಸು ಮುಗಿತಾ ಬಂದಿದೆ. ಕೆಲ ಚಿತ್ರಮಂದಿರಗಳು ಮಲ್ಟಿಪ್ಲೆಕ್ಸ್‌ಗಳಿಂದಾಗಿ ಮುಚ್ಚಲ್ಪಟ್ಟರೆ, ಇದೀಗ ಓಟಿಟಿ ಹಾವಳಿಯಿಂದ ಕೆಲ ಸಿನಿಮಾ ಮಂದಿರಗಳು ತನ್ನ ಆಟ ನಿಲ್ಲಿಸಿವೆ. ದೇವನಗರಿ ದಾವಣಗೆರೆಯಲ್ಲಿ ಹತ್ತಾರು ಚಿತ್ರಮಂದಿರಗಳು ತನ್ನ ಆಟ ನಿಲ್ಲಿಸಿವೆ. ಒಂದು ಕಾಲದಲ್ಲಿ ಸಿನಿ ಕಲಾವಿದರನ್ನೂ ಪೋಷಿಸಿ ಬೆಳೆಸಿದ್ದ ಥಿಯೇಟರ್​ಗಳು ಶತಕಗಳ ಕಾಲ ಸಿನಿ ರಸಿಕರಿಗೆ ಮನೋರಂಜನಾ ಕೇಂದ್ರವಾಗಿದ್ದವು. ದಾವಣಗೆರೆ ಮೊದಲು 'ಮೂಕಿ' ಚಿತ್ರಗಳಿಗೂ ಹೆಸರುವಾಸಿಯಾಗಿತ್ತು.‌ ದಾವಣಗೆರೆಯ ಪ್ರಥಮ ಚಿತ್ರಮಂದಿರ ಅದು ಧನಲಕ್ಷ್ಮಿ ಚಿತ್ರಮಂದಿರ. ಈ ಚಿತ್ರ ಮಂದಿರದಲ್ಲಿ ಮೂಕಿ ಚಿತ್ರಗಳ ಕಾಲದಲ್ಲಿ ಪ್ರಾಜೆಕ್ಟರ್ ಇಟ್ಟು ಸಿನಿಮಾ ಪ್ರದರ್ಶನ ಮಾಡಲಾಗುತ್ತಿತ್ತು.‌

ಸಿನಿಮಾ ಮಂದಿರಗಳಿಗೆ ಬೀಗ (ETV Bharat)

ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿ ಇದ್ದ ಈ 'ಧನಲಕ್ಷ್ಮಿ' ಸಿನಿಮಾ ಮಂದಿರ ಇದ್ದಕ್ಕಿದ್ದಂತೆ ಡ್ರಾಮಾ ಥಿಯೇಟರ್ ಆಗಿ ಬದಲಾಗಿ ಕೆಲವೇ ದಿನಗಳಲ್ಲಿ ಸಿನಿ ಜಗತ್ತಿನಿಂದ ಮರೆಯಾಯಿತು. ಇದೀಗ ಪ್ರಸ್ತುತ ದಿನಗಳಲ್ಲಿ ಹದಿನೈದಕ್ಕೂ ಹೆಚ್ಚು ಸಿನಿಮಾ ಮಂದಿರಗಳ ಪೈಕಿ ದಾವಣಗೆರೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿನಿಮಾ ಮಂದಿರಗಳು ತಮ್ಮ ಆಟವನ್ನು ಮುಂದುವರೆಸಿವೆ. ಮತ್ತಷ್ಟು ಥಿಯೇಟರ್​ಗಳಿಗೆ ಕಾರಣಾಂತರಗಳಿಂದ ಬೀಗ ಜಡಿಯಲಾಗಿದೆ.

ಅರುಣ ಚಿತ್ರಮಂದಿರ (ETV Bharat)

ವಸಂತ, ಅಶೋಕ, ತ್ರಿಶೂಲ್, ತ್ರಿನೇತ್ರ, ಗೀತಾಂಜಲಿ ಈ ಐದು ಥಿಯೇಟರ್​ಗಳು ತನ್ನ ಆಟ ಮುಂದುವರೆಸಿವೆ. ಆದರೆ ಅರುಣ, ಶಿವಾಲಿ, ಅಮಿತ್, ಶಾಂತಿ, ಪುಷ್ಪಾಂಜಲಿ, ಪದ್ಮಾಂಜಲಿ, ಮೋತಿ, ಚಾಮುಂಡೇಶ್ವರಿ, ವೆಂಕಟೇಶ್ವರ, ಗಿರಿ ಟಾಕೀಸ್, ಬಾಲಾಜಿ, ಯಜಮಾನ್ ಇಷ್ಟು ಟಾಕೀಸ್​ಗಳು ತನ್ನ ಆಟವನ್ನು ನಿಲ್ಲಿಸಿವೆ.

ಬೆಣ್ಣೆನಗರಿಯಲ್ಲಿ ತನ್ನ ಆಟವನ್ನು ನಿಲ್ಲಿಸಿದ ಪ್ರಮುಖ ಚಿತ್ರಮಂದಿರಗಳಿವು‌ : ಶಾಂತಿ ಚಿತ್ರಮಂದಿರ ಬಹುದೊಡ್ಡ ಚಿತ್ರಮಂದಿರವಾಗಿತ್ತು. ದಾವಣಗೆರೆ ನಗರದ ಕೆ. ಆ‌ರ್ ರಸ್ತೆಯಲ್ಲಿದ್ದ ಶಾಂತಿ ಟಾಕೀಸ್ ಬಾಗಿಲು ಮುಚ್ಚಿದ ಬಳಿಕ ಇದು ಗ್ಯಾಲಾಕ್ಸಿ ಎಂಬ ಕಲ್ಯಾಣ ಮಂಟಪವಾಗಿ ಬದಲಾಯಿತು. ದಾವಣಗೆರೆ ನಗರದ ಗಾಂಧಿ ವೃತ್ತದಲ್ಲಿರುವ ಮೋತಿ ಟಾಕೀಸ್ ಕೂಡ ಬಾಗಿಲು ಮುಚ್ಚಿದೆ. ಇದು ನಟಿ ಶೃತಿ ಅವರ ಚಿತ್ರಗಳಿಗೂ ಹೆಸರುವಾಸಿ ಆಗಿತ್ತು.

ಪದ್ಮಾಂಜಲಿ ಸಿನಿಮಾ ಮಂದಿರ (ETV Bharat)

ವಿನೋಬನಗರದಲ್ಲಿ ಅಮಿತ್ ಚಿತ್ರಮಂದಿರ ಇತ್ತು. ಅದು ಕೂಡ ಬಾಗಿಲು ಮುಚ್ಚಿದೆ.‌ ಇದಲ್ಲದೇ ಅರುಣ ಚಿತ್ರಮಂದಿರದಲ್ಲೂ ಸದ್ಯ ಪ್ರದರ್ಶನಗಳು ನಡೆಯುತ್ತಿಲ್ಲ. ದಾವಣಗೆರೆ ನಗರದ ಡಾಂಗೆ ಪಾರ್ಕ್ ಬಳಿ ಇರುವ ಯಜಮಾನ್‌ ಚಿತ್ರಮಂದಿರ ರವಿಚಂದ್ರನ್, ವಿಷ್ಣುವರ್ಧನ್ ನಟರ ಚಿತ್ರಗಳಿಗೆ ಹೆಸರುವಾಸಿಯಾಗಿತ್ತು.

1992 ರಲ್ಲಿ ಚಿತ್ರಮಂದಿರ ಸ್ಥಗಿತಗೊಂಡಿತ್ತು. ಬೇತೂರು ರಸ್ತೆಯಲ್ಲಿ ಗಿರಿ ಟಾಕೀಸ್, ಮಾಗನಹಳ್ಳಿ ರಸ್ತೆಯಲ್ಲಿದ್ದ ಎಆರ್ ಟಾಕೀಸ್, ಆಜಾದ್‌ ನಗರ ರಸ್ತೆಯಲ್ಲಿ ವೆಂಕಟೇಶ್ವರ, ನಿಟುವಳ್ಳಿಯ ಮಣಿಕಂಠ ವೃತ್ತದ ಬಳಿ ಇದ್ದ ಚಾಮುಂಡೇಶ್ವರಿ ಟಾಕೀಸ್, ಹುಲ್ಲಿನ ಮಾರುಕಟ್ಟೆ ಬಳಿ ಇದ್ದ ವಿನಾಯಕ ಟಾಕೀಸ್, ಅಶೋಕ್ ರಸ್ತೆಯ ಅಂಡರ್ ಪಾಸ್ ಬಳಿ ಇರುವ ಪುಷ್ಪಾಂಜಲಿ, ಪದ್ಮಾಂಜಲಿ ಚಿತ್ರಮಂದಿರಗಳು ತಮ್ಮ ಆಟವನ್ನು ಸ್ಥಗಿತಗೊಳಿಸಿವೆ. ಸದ್ಯ ವಸಂತ, ಅಶೋಕ, ತ್ರಿಶೂಲ್, ತ್ರಿನೇತ್ರ, ಗೀತಾಂಜಲಿ ಟಾಕೀಸ್, ಎಸ್ ಎಸ್ ಮಾಲ್ ಮೂವಿ ಟೈಮ್ ಚಾಲ್ತಿಯಲ್ಲಿವೆ.

ಸಿನಿ ಮಂದಿರಕ್ಕೆ ಬೀಗ (ETV Bharat)

ಮಲ್ಟಿಫ್ಲೆಕ್ಸ್, ಓಟಿಟಿ ಹಾವಳಿ :ಮಲ್ಟಿಪ್ಲೆಕ್ಸ್‌ಗಳ ಹೊಡೆತಕ್ಕೆ ಕೆಲ ಚಿತ್ರಮಂದಿರಗಳು ನಲುಗಿವೆ ಎಂದು ಡಿಸ್ಟ್ರಿಬ್ಯೂಟರ್ ಚಂದ್ರಣ್ಣ ಹೇಳಿದ್ದಾರೆ. ಬ್ಲಾಕ್ ಟಿಕೆಟ್​ಗಳ ಖರೀದಿ, ಹೊಸ ಚಿತ್ರಗಳು ಬಾರದೇ ಇರುವುದು, ಖ್ಯಾತಿ ಪಡೆದ ಹೀರೋಗಳ ಚಿತ್ರಗಳು ಸರಿಯಾದ ಸಮಯಕ್ಕೆ ಬಾರದೇ ಇರುವುದು. ಟಾಕೀಸ್​ಗಳಿಗೆ ಆದಾಯ ಕೊರತೆ, ಅಧಿಕ ವಿದ್ಯುತ್ ಶುಲ್ಕ, ನಿರ್ವಹಣೆ ಶುಲ್ಕದ ಸಮಸ್ಯೆ, ಸಿಬ್ಬಂದಿಗೆ ವೇತನ, ಸಿಂಗಲ್ ಸ್ಕ್ರೀನ್, ಚಿತ್ರಮಂದಿರದ ನಿರ್ವಹಣೆ, ಬಾಡಿಗೆ, ಕಂದಾಯ ಕಟ್ಟಲು ಹಣದ ಕೊರತೆ ಎದುರಾಗಿದೆ. ಇನ್ನು ಕೆಲ ಆಸ್ತಿ ವಿವಾದ ಕೋರ್ಟ್​ನಲ್ಲಿರುವುದರಿಂದ ಕೆಲ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ.‌

ಡಿಸ್ಟ್ರಿಬ್ಯೂಟರ್ ಚಂದ್ರಪ್ಪ ಕೆ. ಜಿ ಅವರು ಹೇಳಿದ್ದೇನು?: ಡಿಸ್ಟ್ರಿಬ್ಯೂಟರ್ ಚಂದ್ರಪ್ಪ ಕೆ. ಜಿ ಈಟಿವಿ ಭಾರತದ ಜೊತೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿ, "ಹದಿನೈದು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 17 ಚಿತ್ರಮಂದಿರಗಳು ಚಾಲ್ತಿಯಲ್ಲಿದ್ದವು. ಇದೀಗ ಕೇವಲ 05 ಚಿತ್ರಮಂದಿರಗಳು ಚಾಲ್ತಿಯಲ್ಲಿವೆ. ಈ ಓಟಿಟಿ, ಮಲ್ಟಿಫ್ಲೆಕ್ಸ್​ನ್ನು ಎದುರಿಸಲು ಆಗದೆ ಕೆಲ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ‌'' ಎಂದರು.

ಇನ್ನು ಕೆಲ ಸಿನಿಮಾ ಮಂದಿರಗಳು ಆಸ್ತಿ ವಿವಾದ ಹಿನ್ನೆಲೆಯಲ್ಲಿ ಆಟ ನಿಲ್ಲಿಸಿವೆ. ಕೆಲವು ಡಿಸ್ಟ್ರಿಬ್ಯೂಟರ್ ಹಾಗೂ ಮಾಲೀಕರ ನಡುವೆ ಹಗ್ಗಜಗ್ಗಾಟಕ್ಕೆ ಚಿತ್ರಮಂದಿರಗಳು ಬಲಿಯಾಗಿವೆ. ಹೆಸರುವಾಸಿ ನಾಯಕ ನಟರುಗಳ ಚಿತ್ರಗಳು ಮೂರು ನಾಲ್ಕು ವರ್ಷಕ್ಕೆ ಒಂದು ಸಿನಿಮಾ ಬರುತ್ತಿರುವುದು, ಕನ್ನಡ ಚಿತ್ರಗಳು ಸರಿಯಾದ ಸಮಯಕ್ಕೆ ಬಾರದೇ ಇರುವುದು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. ಸದ್ಯ ವಸಂತ, ಅಶೋಕ, ಗೀತಾಂಜಲಿ, ತ್ರಿಶೂಲ್, ತ್ರಿನೇತ್ರ ಈ ಐದು ಥಿಯೇಟರ್​ಗಳು ಚಾಲ್ತಿಯಲ್ಲಿವೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ :ಚಿತ್ರಮಂದಿರಗಳ ಕಾರ್ಮಿಕರ ಗೋಳು ಕೇಳೋರು ಯಾರು?

ABOUT THE AUTHOR

...view details