ಉಡುಪಿ:ಕನ್ಯಾ ಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅನ್ನು ಜಿಲ್ಲಾದ್ಯಂತ ಭಾನುವಾರ ಕ್ರೆಸ್ತರು ಸಂಭ್ರಮದಿಂದ ಆಚರಿಸಿದರು. ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿದರು. ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಚರ್ಚ್ಗಳಲ್ಲಿ ಧರ್ಮಗುರುಗಳು ಭತ್ತದ ತೆನೆಯನ್ನು ಆಶೀರ್ವದಿಸಿ, ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಸಸ್ಯಾಹಾರದ ಭೋಜನ: ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಹೊಸ ಭತ್ತದ ತೆನೆಯನ್ನು ನೀಡಿ ಹರಸಿದರು. ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ವಿತರಿಸಲಾಯಿತು. ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿದರು. ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಮಾಡಿ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ, ಮನೆಗಳಲ್ಲಿ ಸಂಪೂರ್ಣ ಸಸ್ಯಾಹಾರದ ಭೋಜನ ತಯಾರಿಸಿ ಕುಟುಂಬದವರೆಲ್ಲ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡಿದರು.
ಹಬ್ಬಕ್ಕೆ ಮುಂಚಿತವಾಗಿ 9 ದಿನ ಎಲ್ಲಾ ಚರ್ಚ್ಗಳಲ್ಲಿ ಮಾತೆ ಮೇರಿಯ ಕೃಪೆಗೆ ಬೇಡಿಕೊಂಡು ವಿಶೇಷ ಪ್ರಾರ್ಥನೆ (ನವೇನಾ) ನಡೆಯುತ್ತದೆ. 9ನೇ ದಿನವನ್ನು ಮೊಂತಿ ಹಬ್ಬವಾಗಿ ಕರಾವಳಿಯ ಕ್ರೈಸ್ತ ಬಂಧುಗಳು ಆಚರಿಸುತ್ತಾರೆ. ಹಬ್ಬದ ದಿನದಂದು ಕನ್ಯಾ ಮರಿಯಮ್ಮನ ಮೂರ್ತಿಯನ್ನು ಚರ್ಚ್ನ ಮುಂಭಾಗದಲ್ಲಿಟ್ಟು, ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಪುಷ್ಪಾರ್ಪಣೆ ಮಾಡಿದ ನಂತರ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆಗಳು ನಡೆಯುತ್ತದೆ.
ಈ ವೇಳೆ ಗದ್ದೆಗಳಲ್ಲಿ ಬೆಳೆದ ಹೊಸ ತೆನೆಯನ್ನು ಗೌರವಪೂರ್ವಕವಾಗಿ ವಾಳೆಯ ಗುರಿಕಾರರು ಚರ್ಚ್ಗೆ ತರುತ್ತಾರೆ. ಅದಕ್ಕೆ ಧರ್ಮಗುರುಗಳು ಆಶೀರ್ವಚನ ಮಾಡಿ, ಪೂಜೆಯ ಬಳಿಕ ಹಬ್ಬದ ಪ್ರಸಾದ ರೂಪದಲ್ಲಿ ಕುಟುಂಬಗಳಿಗೆ ತೆನೆ ವಿತರಣೆ ಮಾಡುತ್ತಾರೆ. ಅಲ್ಲದೆ, ಪುಷ್ಪಾರ್ಪಣೆ ಮಾಡಿದ ಪುಟಾಣಿ ಮಕ್ಕಳಿಗೆ ಕಬ್ಬು ಹಾಗೂ ಸಿಹಿ ತಿಂಡಿಗಳನ್ನು ನೀಡಲಾಗುತ್ತದೆ.