ಕರ್ನಾಟಕ

karnataka

ETV Bharat / state

ಕುಟುಂಬದ ಬೆಂಬಲ, ಜನರ ಆಶೀರ್ವಾದ ನನಗಿದೆ: ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ - Priyanka Jarakiholi Interview

ಕುಟುಂಬದ ಬೆಂಬಲ, ಜನರ ಆಶೀರ್ವಾದ ನನಗಿದೆ ಎಂದು ಈಟಿವಿ ಭಾರತ ನಡೆಸಿದ ಸಂದರ್ಶನದಲ್ಲಿ, ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

CHIKKODI CONSTITUENCY  CANDIDATE PRIYANKA JARAKIHOLI  BELAGAVI  LOK SABHA ELECTION 2024
ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಸಂದರ್ಶನ

By ETV Bharat Karnataka Team

Published : Apr 6, 2024, 1:41 PM IST

ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ:ಈ ಬಾರಿ ಕಾಂಗ್ರೆಸ್ ಪಕ್ಷ ಯುವಕರಿಗೆ ಅವಕಾಶ ಮಾಡಿ ಕೊಟ್ಟಿದೆ. ನಾನು ಯುವತಿಯಾಗಿದ್ದು, ನಿಮ್ಮ ಬೆಂಬಲ ನನಗೆ ಬೇಕು. ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರ ಪರವಾಗಿ ನಿಂತು ಕೆಲಸ ಮಾಡುವ ಇಚ್ಛೆ ಹೊಂದಿದ್ದೇನೆ. ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಮತದಾರರಿಗೆ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಕೇಳಿಕೊಂಡರು.

ಯಮಕನಮರಡಿ ಕ್ಷೇತ್ರದ ದೇವಗಿರಿಯಲ್ಲಿ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಮಾತನಾಡಿದ ಪ್ರಿಯಾಂಕಾ ಜಾರಕಿಹೊಳಿ, ತಂದೆಯವರ ಯಮಕನಮರಡಿ ಕ್ಷೇತ್ರದಿಂದ ಈಗಾಗಲೇ ಎರಡು ವಾರದಿಂದ ಪ್ರಚಾರ ಆರಂಭಿಸಿದ್ದಾರೆ. ಮುಂದೆ ಸ್ಥಳೀಯ ಶಾಸಕರ ಜೊತೆಗೆ ಅಥಣಿ, ಕಾಗವಾಡ, ಚಿಕ್ಕೋಡಿ - ಸದಲಗಾ ಕ್ಷೇತ್ರಗಳಿಗೆ ಹೋಗಬೇಕಿದೆ. ಜನರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದು ಹೇಳಿದರು.

ತಂದೆಯವರ ಅಭಿವೃದ್ಧಿ ಕೆಲಸಗಳು ಖಂಡಿತವಾಗಲೂ ನನ್ನ ಕೈ ಹಿಡಿಯುತ್ತವೆ. ಜನರು ಕೂಡ ಅಭಿವೃದ್ಧಿಯನ್ನೇ ಬಯಸುತ್ತಾರೆ. ಬಿಜೆಪಿಯವರು ಏನೂ ಕೆಲಸ ಮಾಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ನಮಗೆ ಆಶೀರ್ವಾದ ಮಾಡಿದರೆ, ಆ ಭಾಗದ ಜನರ ಪರವಾಗಿ ನಿಂತು, ಅಭಿವೃದ್ದಿ ಕೆಲಸ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಗ್ಯಾರಂಟಿಗಳು ವರ್ಕೌಟ್ ಆದಂತೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಜಾರಕಿಹೊಳಿ, ಖಂಡಿತವಾಗಲೂ ನಮಗೆ ಸಹಾಯ ಆಗುತ್ತವೆ. ಹಳ್ಳಿಗಳಲ್ಲಿ ನಾವು ಜನರ ಅಭಿಪ್ರಾಯ ಪಡೆದ ಪ್ರಕಾರ ಬಹುತೇಕ ಶೇ.95ರಷ್ಟು ಮಹಿಳೆಯರಿಗೆ ಗ್ಯಾರಂಟಿಗಳು ತಲುಪಿದ್ದು, ಎಲ್ಲಾದರೂ ಸಮಸ್ಯೆ ಇದ್ದರೆ ಅವುಗಳನ್ನು ಪರಿಹರಿಸುವ ಕೆಲಸ ಮಾಡುತ್ತೇವೆ ಎಂದರು.

ಸಚಿವರ ಮಕ್ಕಳಿಗೆ ಲೋಕಸಭೆ ಟಿಕೆಟ್ ನೀಡಿರುವ ವಿಚಾರಕ್ಕೆ, ಇದು ಪಕ್ಷದ ವರಿಷ್ಠರ ನಿರ್ಣಯ. ಸಾಧಕ - ಭಾದಕ ವಿಚಾರ ಮಾಡಿ, ಅಭ್ಯರ್ಥಿಗಳ ಸಾಮರ್ಥ್ಯ ನೋಡಿ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಅಂತಿಮವಾಗಿ ಮತದಾರ ಪ್ರಭುಗಳು ನಿರ್ಣಯ ತೆಗೆದುಕೊಳ್ಳಬೇಕು ಎಂದು ಪ್ರಿಯಾಂಕಾ ಅಭಿಪ್ರಾಯ ವ್ಯಕ್ತಪಡಿಸಿದರು.

ತಂದೆ ಸತೀಶ ಜಾರಕಿಹೊಳಿ ತಮಗೆ ಏನೆಲ್ಲಾ ಟಿಪ್ಸ್ ಕೊಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ಜಾರಕಿಹೊಳಿ, ಜನರ ಜೊತೆಗೆ ನಾವು ಹೇಗೆ ವರ್ತಿಸಬೇಕು. ನಿರಂತರವಾಗಿ ಹೇಗೆ ಒಡನಾಟ ಇಟ್ಟುಕೊಳ್ಳಬೇಕು. ಅದೇ ರೀತಿ ಸಂಪರ್ಕ ಬಿಡಬಾರದು. ಎಲ್ಲರಿಗೂ ನಮಸ್ಕಾರ ಮಾಡುವುದು ಮತ್ತು ಹಿರಿಯರಿಗೆ ಗೌರವ ನೀಡಬೇಕು. ಶಿಸ್ತಿನಿಂದ ವರ್ತಿಸಬೇಕು. ಸಮಯಕ್ಕೆ ಹೆಚ್ಚಿನ ಬೆಲೆ ಕೊಡುವುದು ಸೇರಿ ಬಹಳಷ್ಟು ವಿಚಾರಗಳನ್ನು ಅವರಿಂದ ಕಲಿತಿದ್ದೇವೆ. ಮುಂದೆ ಅನುಭವ ಆದಂತೆ ಮತ್ತಷ್ಟು ಹೊಸ ವಿಚಾರ ಕಲಿಯುವ ಹಂಬಲವಿದೆ ಎಂದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ನಿಮ್ಮ‌ ವಿಜನ್ ಏನು ಎಂಬ ವಿಚಾರವಾಗಿ ಮಾತನಾಡಿದ ಅವರು, ಐದು ವರ್ಷ ಜನರು ನನಗೆ ಆಶೀರ್ವಾದ ಮಾಡಿದರೆ, ಆಯಾ ಶಾಸಕರ ಜೊತೆಗೆ ನಿಂತು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಉದ್ಯೋಗ ಸೃಷ್ಟಿಸಲಾಗುವುದು. ಅದೇ ರೀತಿ ಮಹಿಳೆಯರಿಗೆ ನೈತಿಕ ಶಕ್ತಿ ತುಂಬುತ್ತೇವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು.

ಮೋದಿ ಅಲೆ ಬೇಧಿಸುವ ವಿಶ್ವಾಸ ತಮಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ಜಾರಕಿಹೊಳಿ, ಖಂಡಿತವಾಗಲೂ ಭೇದಿಸುತ್ತೇವೆ. ಈ ಬಾರಿ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಲೆ ಇದೆ. ಕಳೆದ ಐದು ವರ್ಷಗಳಿಂದ ಹಾಲಿ ಸಂಸದರು ಯಾವುದೇ ರೀತಿ ಅಭಿವೃದ್ಧಿ ಮಾಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ಹಾಗಾಗಿ, ಜನ ನಮಗೆ ಆಶೀರ್ವಾದ ಮಾಡಿದರೆ, ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.

ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಕುಟುಂಬ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಬೆಂಬಲ ಹಾಗೂ ಹಿರಿಯರ ಆಶೀರ್ವಾದವಿದೆ ಎಂದು ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಓದಿ;ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಕಾಂಗ್ರೆಸ್ ಅಭ್ಯರ್ಥಿಗೆ ಕಳಿಸಿಕೊಡುವೆ: ಪಿ.ಸಿ.ಗದ್ದಿಗೌಡರ - P C Gaddigoudar

ABOUT THE AUTHOR

...view details