ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಪವಾಡ ಪುರುಷ ಘನನೀಲಿ ಸಿದ್ದಪ್ಪಾಜಿ ಜಾತ್ರೆಯ ಮೊದಲ ದಿನ ಚಂದ್ರ ಮಂಡಲೋತ್ಸವ ಸಹಸ್ರಾರು ಜನರ ಹರ್ಷೋದ್ಗಾರ ನಡುವೆ ನೆರವೇರಿದೆ.
ರಾಜ ಬೊಪ್ಪೆಗೌಡನ ಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ಚಂದ್ರಮಂಡಲಕ್ಕೆ ರಾತ್ರಿ 11.42ರ ವೇಳೆಗೆ ಅಗ್ನಿಸ್ಪರ್ಶ ಮಾಡಿದರು. ಆಕಾಶಾಭಿಮುಖವಾಗಿ ಹೊತ್ತಿ ಉರಿದ ಚಂದ್ರಮಂಡಲದ ಜ್ಯೋತಿ ಉತ್ತರ ದಿಕ್ಕಿಗೆ ವಾಲಿತು. ಚಂದ್ರ ಮಂಡಲದ ಬೆಂಕಿಯ ಜ್ವಾಲೆ ಯಾವ ದಿಕ್ಕಿಗೆ ವಾಲುತ್ತದೆೋ ಆ ಭಾಗಕ್ಕೆ ವರ್ಷವಿಡೀ ಮಳೆ, ಬೆಳೆ ಹಾಗೂ ಸಕಲವೂ ಸಮೃದ್ಧಿಯಾಗುತ್ತದೆ ಎಂಬುದು ನಂಬಿಕೆ.
ನೀಲಗಾರರ ಪರಂಪರೆಯವರು, ಭಕ್ತರು ಚಂದ್ರಮಂಡಲದ ಭಸ್ಮಕ್ಕಾಗಿ ಮುಗಿಬಿದ್ದು ಹಣೆಗೆ ಹಚ್ಚಿಕೊಂಡು ಭಕ್ತಿಭಾವ ಮೆರೆದರು. ಚಂದ್ರ ಮಂಡಲಕ್ಕೂ ಮುನ್ನ ಸಿದ್ದಪ್ಪಾಜಿ ಗದ್ದುಗೆಗೆ ಕಂಡಾಯಗಳ ಮೆರವಣಿಗೆ ತಮಟೆ, ಡೊಳ್ಳು, ಜಾಗಟೆ ಮೂಲಕ ಆಗಮಿಸಿ ಪ್ರದಕ್ಷಿಣೆ ಮಾಡಲಾಯಿತು. ಈ ವೇಳೆ ನೆರೆದಿದ್ಧ ಭಕ್ತಸಾಗರ ಜಯಘೋಷ ಮೊಳಗಿಸಿತು.