ಚಿಕ್ಕಮಗಳೂರು : ಇಳೆಗೆ ಹಸಿರ ಹೊದಿಕೆಯ ಸ್ವಾಗತ. ಮುಗಿಲೆತ್ತರದ ಬೆಟ್ಟಗುಡ್ಡಗಳ ರಸ್ತೆ ಉದ್ಧಕ್ಕೂ ದಟ್ಟ ಮಂಜಿನ ಕಣ್ಣಾಮುಚ್ಚಾಲೆ ಆಟ. ಹಸಿರ ವನರಾಶಿ ನಡುವೆ ಸಾಗೋ ಬೆಳ್ಮುಗಿಲ ಸಾಲು. ದಿನಕರನ ಕಿರಣಕ್ಕೆ ನಾಚಿ ನೀರಾಗೋ ವೈಯ್ಯಾರದ ಮಂಜು. ರಸ್ತೆ ಉದ್ಧಕ್ಕೂ ಧುಮ್ಮಿಕ್ಕೋ ಜಲಪಾತದ ಸೊಬಗು.
ಹೌದು, ಮಲೆನಾಡಲ್ಲೀಗ ದೃಶ್ಯ ಕಾವ್ಯವೇ ಮೇಳೈಸಿದೆ. ಪ್ರಕೃತಿಯ ತವರು ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗ ಮಾತೆ ತನ್ನ ನೈಜ ಸೊಬಗನ್ನ ಪ್ರದರ್ಶನಕ್ಕಿಟ್ಟಿದ್ದಾಳೆ. ಚಾರ್ಮಾಡಿಘಾಟಿ ರಸ್ತೆ ಉದ್ಧಕ್ಕೂ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತಗಳು ಹೊಸ ಲೋಕವನ್ನೇ ಸೃಷ್ಠಿಸಿವೆ. ಆ ಪ್ರಕೃತಿ ಮಾತೆಯ ನೈಜ ಸೊಬಗಿನ ಅನಾವರಣ ಹೇಗಿದೆ ನೀವೇ ನೋಡಿ.
ಕಾಫಿನಾಡು ಅಂದ್ರೆ ಸಾಕು, ಅಲ್ಲಿನ ಸೌಂದರ್ಯ ರಾಶಿ ಕಣ್ಮುಂದೆ ಬಂದು ನಿಲ್ಲುತ್ತೆ. ಬೆಟ್ಟ-ಗುಡ್ಡಗಳ ಸಾಲು, ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ನಿರಂತರ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯೋ ಜಲಧಾರೆ, ಚಾರ್ಮಾಡಿ ಘಾಟಿಯ ಸೊಬಗನ್ನ ಇಮ್ಮಡಿಗೊಳಿಸಿದೆ.
ಮಳೆಗಾಲ ಬಂತಂದ್ರೆ ಸಾಕು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ನದಿಗಳು ಜೀವ ಕಳೆಯನ್ನ ಪಡೆದುಕೊಳ್ತವೆ. ಬಂಡೆಗಳ ಮೇಲಿನಿಂದ ಝುಳು - ಝುಳು ನಿನಾದ ಗೈಯುತ್ತಾ ಧುಮ್ಮಿಕ್ಕೋ ಜಲಧಾರೆಗಳು ಪ್ರಕೃತಿಯೇ ಪ್ರಕೃತಿಗೆ ಮಾಡಿದ ಕ್ಷೀರಧಾರೆಯಂತೆ ಭಾಸವಾಗುತ್ತೆ.
ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಸಾಲು ಹಸಿರೊದ್ದು ಝೇಂಕರಿಸುತ್ತಿದ್ರೆ, ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿ ಮಾರ್ಪಟ್ಟಿದೆ. ಸತತ ಮಳೆಯಿಂದ ಚಾರ್ಮಾಡಿ ಘಾಟಿನ ರಸ್ತೆ ಉದ್ಧಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಚಾರ್ಮಾಡಿಯ ಒಡಲಿನಿಂದ ಹಾಲ್ನೊರೆಯಂತೆ ಸೂಸೋ ಫಾಲ್ಸ್ಗಳು ನೋಡುಗರ ಕಣ್ಣನ್ನ ಕೊರೈಸುತ್ತಿದೆ.