ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿಷ್ಠೆಯಾಗಿರುವ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷದ ನೆಲೆ ಉಳಿಸಿಕೊಳ್ಳುವ ಸವಾಲು ಎದುರಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ನಿಂದ ಡಿ.ಕೆ. ಶಿವಕುಮಾರ್ ಅಥವಾ ಅವರ ಸಹೋದರ ಡಿ.ಕೆ. ಸುರೇಶ್ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತ ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಈ ಕ್ಷೇತ್ರ ಜೆಡಿಎಸ್ ತೆಕ್ಕೆಯಲ್ಲಿಯೇ ಇರಲಿದೆಯೋ ಅಥವಾ ಬಿಜೆಪಿ ಪಾಲಾಗಲಿದೆಯೋ ಎನ್ನುವ ಜಿಜ್ಞಾಸೆ ತಲೆದೂರಿದೆ. ಇಲ್ಲಿ ತ್ಯಾಗಮಯಿ ಯಾರು?. ಯಾರಿಗೆ ಲಾಭವಾಗಲಿದೆ ಎಂಬ ಚರ್ಚೆಗಳು ಸಹ ಜೋರಾಗಿ ನಡೆಯುತ್ತಿವೆ.
ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡುವುದೇ ಬಿಜೆಪಿ ಹಾಗೂ ಜೆಡಿಎಸ್‌ಗೆ ಸವಾಲಾಗಿ ಪರಿಣಮಿಸಿದೆ. ಎರಡೂ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರ ಎಲ್ಲಾ ನಾಯಕರಲ್ಲೂ ಇದೆ. ಆದರೆ ಕ್ಷೇತ್ರವನ್ನು ಯಾರು ತ್ಯಾಗ ಮಾಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ರಾಮನಗರ ಹೇಳಿಕೇಳಿ ಒಂದು ಕಾಲದಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. 2018ರಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಗೆದ್ದಿದ್ದರೆ 2023ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಕೇವಲ ಚನ್ನಪಟ್ಟಣದಲ್ಲಿ ಮಾತ್ರ ಜೆಡಿಎಸ್ ಗೆದ್ದಿತ್ತು.
ಇದೀಗ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮತ್ತೆ ಜೆಡಿಎಸ್ ಹಾಗೂ ಬಿಜೆಪಿ ಮೇಲೆದ್ದಿದೆ. ಅಸ್ತಿತ್ವ ಕಳೆದುಕೊಂಡಿರುವ ಜಿಲ್ಲೆಯಲ್ಲೇ ತನ್ನ ಪ್ರಾಬಲ್ಯ ಮೆರೆಯಬೇಕೆಂಬುದು ದಳಪತಿಗಳ ಲೆಕ್ಕಾಚಾರವಾಗಿದೆ.
ಸೋತರೂ ಕ್ಷೇತ್ರದಲ್ಲಿ ಸೈನಿಕನ ಹಿಡಿತ:ಕಳೆದೆರಡು ಚುನಾವಣೆಯಲ್ಲಿ ಸೋತು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟು ಚುನಾವಣಾ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಚುನಾವಣೆಯಲ್ಲಿ ಸೋತಿದ್ದರೂ ಚನ್ನಪಟ್ಟಣದಲ್ಲಿ ಸೈನಿಕ ತಮ್ಮದೇ ಆದ ಹಿಡಿತ ಮತ್ತು ಬೆಂಬಲಿಗರನ್ನು ಹೊಂದಿದ್ದಾರೆ. ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗುವ ಇಂಗಿತವನ್ನು ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ವ್ಯಕ್ತಪಡಿಸಿದ್ದಾರೆ. ಆದರೆ ತಾನು ಗೆದ್ದಿರುವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಜೆಡಿಎಸ್ ಒಪ್ಪುತ್ತದೆಯೇ ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಚನ್ನಪಟ್ಟಣದ ಮತದಾರರು, ಪಕ್ಷ ಬಯಸಿದರೆ ಸ್ಪರ್ಧಿಸದೆ ವಿಧಿ ಇಲ್ಲ: ಡಿ.ಕೆ.ಶಿವಕುಮಾರ್ - D K Shivakumar
ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆಯಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿಗೆ ಇದೇ ಕ್ಷೇತ್ರದಿಂದಲೇ ರಾಜಕೀಯ ಪುನರ್ಜನ್ಮ ನೀಡಬೇಕೆಂಬ ಮಹಾದಾಸೆ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಂದಿದ್ದಾರೆ ಎನ್ನಲಾಗಿದೆ. ಉಭಯ ಪಕ್ಷಗಳ ನಾಯಕರು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮೈತ್ರಿ ಕೂಟಕ್ಕೆ ಲಾಭವಾಗುತ್ತದೆ ಎಂಬುದು ಲೋಕಸಭೆ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗುವಂತೆ ಬಿಜೆಪಿ-ಜೆಡಿಎಸ್ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲಿ ಕ್ಷೇತ್ರವನ್ನು ಬಿಟ್ಟು ಕೊಟ್ಟು ತ್ಯಾಗ ಮಾಡುವವರು ಯಾರು? ಎಂಬುದು ಕೌತುಕ.