ಶಿವಮೊಗ್ಗ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಅವರು ತುಂಬಾ ಪ್ರಾಮಾಣಿಕರು. ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಆತ್ಮಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ, ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಚಂದ್ರಶೇಖರನ್ ಪತ್ನಿ ಕವಿತ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪತಿ ಇಲಾಖೆಯಲ್ಲಿ ತುಂಬಾ ಪ್ರಾಮಾಣಿಕರು. ಅವರು ಯಾವುದೇ ಹಣ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಸರ್ಕಾರ ಈಗ ನಮ್ಮ ಪತಿ ಆತ್ಮಹತ್ಯೆಯ ವಿಚಾರವನ್ನು ಸಿಐಡಿಗೆ ವಹಿಸಿದೆ ಎಂದರು.
ನಮಗೆ ಸರ್ಕಾರದ ಮೇಲೆ ಪೂರ್ಣ ವಿಶ್ವಾಸವಿದೆ. ಸೂಕ್ತ ತನಿಖೆ ನಡೆಸಿ, ಸತ್ಯಾಂಶವನ್ನು ಹೊರ ತರಬೇಕು. ಕಚೇರಿಯಲ್ಲಿ ಒತ್ತಡ ಇತ್ತು ಎಂದು ನಮ್ಮ ಮನೆಯವರು ಎಂದೂ ನಮ್ಮ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಅವರ ಕಚೇರಿಯ ಇತರ ಸಿಬ್ಬಂದಿ ಚಂದ್ರಶೇಖರನ್ ಅವರಿಗೆ ಒತ್ತಡ ಇದೆ ಎಂದು ಹೇಳುತ್ತಿದ್ದರು. ನಮ್ಮ ಮನೆಯವರು ಮೂರು ಜನ ಅಧಿಕಾರಿಗಳ ವಿರುದ್ದ ತಮ್ಮ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ. ಆ ಮೂರು ಜನರ ವಿರುದ್ದ ನಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ನಮ್ಮ ಪತಿ ಎಂಪಿಎಂನಲ್ಲಿ ಕೆಲಸ ಮಾಡುವಾಗ 5 ಸಾವಿರ ಜನರ ಅಕೌಂಟ್ ನೋಡಿಕೊಂಡವರು ಎಂದು ತಿಳಿಸಿದರು.