ಚಾಮರಾಜನಗರ: ಚಾಮರಾಜನಗರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ತಂತ್ರ ಯಶಸ್ವಿಯಾಗಿದ್ದು, ಗೆಲುವಿನ ಹೊಸ್ತಿಲಲ್ಲಿದ್ದ ಕಾಂಗ್ರೆಸ್ ಮುಗ್ಗರಿಸಿದೆ. 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ನ ಮೂವರು ಸದಸ್ಯರು ಗೈರಾದ ಕಾರಣ ಅನಾಯಾಸವಾಗಿ ಬಿಜೆಪಿ 2ನೇ ಬಾರಿಗೆ ಅಧಿಕಾರದ ಗದ್ದುಗೆಗೇರಿತು.
ಬಿಜೆಪಿಯ ಸುರೇಶ್ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಮತಾ ಬಾಲಸುಬ್ರಹ್ಮಣ್ಯ ಆಯ್ಕೆಯಾದರು.
ಬಿಜೆಪಿ ಆಪರೇಷನ್‌ಗೆ ರಿವರ್ಸ್ ಪ್ಲಾನ್ ಮಾಡಲು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಫಲರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೊನೆ ಘಳಿಗೆಯಲ್ಲಿ ಅಧಿಕಾರ ಕಳೆದುಕೊಂಡಿದೆ.
31 ಸದಸ್ಯರು, ಸಂಸದ, ಶಾಸಕರ ಬಲದೊಂದಿಗೆ ನಗರಸಭೆ 33 ಸದಸ್ಯ ಬಲ ಹೊಂದಿತ್ತು. ಓರ್ವ ಬಿಎಸ್ಪಿ ಸದಸ್ಯ ನಗರಸಭೆ ಸಭೆಗಳಿಗೆ ಗೈರಾಗಿದ್ದು, ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿದ್ದರು.
ಶಾಸಕ, ಸಂಸದರು ಸೇರಿ 32 ಸದಸ್ಯರ ಬಲ ಹೊಂದಿರುವ ನಗರಸಭೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯಿಂದ ಸುರೇಶ್, ಮಮತಾ ಹಾಗೂ ಕಾಂಗ್ರೆಸ್ ಪಕ್ಷದಿಂದ ಆರ್.ಎಂ.ರಾಜಪ್ಪ, ಅಬ್ರಾರ್ ಅಹಮದ್ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಮತ ಹಾಕಿದರು. ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಮಹೇಶ್ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಿದರು.
ಬಿಜೆಪಿಯ ರಾಮಸಮುದ್ರ ಸುರೇಶ್ ಹಾಗೂ ಮಮತಾ 15 ಮತಗಳನ್ನು ಪಡೆದು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾದರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಆರ್.ಎಂ.ರಾಜಪ್ಪ, ಎಸ್‌ಡಿಪಿಐ ಅಭ್ಯರ್ಥಿ ಅಬ್ರಾರ್ ಅಹಮದ್ ತಲಾ 14 ಮತಗಳನ್ನು ಪಡೆದು ಪರಾಜಿತರಾದರು. ಮೂವರು ಕಾಂಗ್ರೆಸ್ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯಮ್ಮ ಸಭೆಗೆ ಗೈರಾಗಿದ್ದು, ಮತ್ತೋರ್ವ ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ಸಭೆಗೆ ಆಗಮಿಸಿ, ಬಿಜೆಪಿ ಪರ ಕೈ ಎತ್ತಿದರು. ಬಿಜೆಪಿ ಸದಸ್ಯ ಮಹದೇವಯ್ಯ ಕಾಂಗ್ರೆಸ್ ಪರವಾಗಿ ಕೈ ಎತ್ತುವ ಮೂಲಕ ಕ್ರಾಸ್ ಓಟ್ ಮಾಡಿದರು.
ಸದಸ್ಯತ್ವ ರದ್ದತಿಗೆ ಬಿಜೆಪಿ ಆಕ್ರೋಶ:ಚಾಮರಾಜನಗರ ನಗರಸಭೆಯ 9 ಸಭೆಗಳಿಗೆ ಗೈರಾದ ಹಿನ್ನೆಲೆಯಲ್ಲಿ ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಪ್ರಕಾಶ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಡಿಸಿ ಶಿಲ್ಪಾನಾಗ್ ಕಳೆದ ಶುಕ್ರವಾರ ಆದೇಶ ಹೊರಡಿಸಿರುವುದಕ್ಕೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ನಗರಸಭೆ ಅಧ್ಯಕ್ಷ ಚುನಾವಣಾ ಪೂರ್ವದಲ್ಲಿ ಡಿಸಿ ಸದಸ್ಯತ್ವವನ್ನು ಅನರ್ಹಗೊಳಿಸುವ ಮೂಲಕ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ. ಶನಿವಾರ, ಭಾನುವಾರ ಕೋರ್ಟ್ಗಳಿಗೆ ರಜೆ ಇರುವ ಕಾರಣ ಬೇಕಂತಲೇ ಅನರ್ಹ ಆದೇಶ ಹೊರಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ ಕುಮಾರ್ ದೂರಿದರು.
'ಅನಾರೋಗ್ಯದಿಂದ ಸಭೆಗೆ ಹಾಜರಾಗಿರಲಿಲ್ಲ':ಬಿಜೆಪಿಯನ್ನು ಬೆಂಬಲಿಸಿದೆ ಎನ್ನುವ ಒಂದೇ ಕಾರಣಕ್ಕೆ ನನ್ನನ್ನು ಅನರ್ಹಗಳಿಸಲಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ನಗರಸಭೆ ಅನರ್ಹ ಸದಸ್ಯ ಪ್ರಕಾಶ್ ಗಂಭೀರ ಆರೋಪ ಮಾಡಿದರು.
ಜಿಲ್ಲಾಧಿಕಾರಿ ನೋಟಿಸ್ ನೀಡಿಲ್ಲ, ಅದೂ ಅಲ್ಲದೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಈ ಎಲ್ಲಾ ವಿಚಾರವನ್ನು ಡಿಸಿ ಅವರಿಗೆ ತಿಳಿಸಿದ್ದರೂ ನನ್ನನ್ನು ಅನರ್ಹಗೊಳಿಸಿದ್ದಾರೆ. ನಾನು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಮದ್ದೂರು ಪುರಸಭೆ ಗದ್ದುಗೆ ಕಾಂಗ್ರೆಸ್‌ಗೆ, ಜೆಡಿಎಸ್ಗೆ ಮುಖಭಂಗ - Maddur Town Municipal Election