ಬೆಂಗಳೂರು:ವಿಪಕ್ಷದ ನಾಯಕನಿಗೆ ನೀಡಬೇಕಾದ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ವಿಧಾನ ಪರಿಷತ್ ವಿಪಕ್ಷದ ನಾಯಕನಾದರೂ ನನಗೆ ಸರ್ಕಾರಿ ನಿವಾಸ ನೀಡಿಲ್ಲ. ಕೇವಲ ಓರ್ವ ಗನ್ ಮ್ಯಾನ್ ನೀಡಿದ್ದಾರೆ. ಬೆಂಗಾವಲು ಪಡೆ ನೀಡುವಂತೆ ಡಿಐಜಿಗೆ ಪತ್ರ ಬರೆದಿದ್ದೇನೆ. ಅವರು ಮೀಟಿಂಗ್ ಮಾಡಿ ಪರಿಶೀಲಿಸುತ್ತೇನೆ ಎನ್ನುತ್ತಾರೆ. ನಾನು ದಲಿತನಾಗಿದ್ದಕ್ಕೆ ಹೀಗೆ ನಡೆದುಕೊಳ್ಳುತ್ತಾರಾ?. ನನಗೆ ಎಸ್ಕಾರ್ಟ್ ಕೊಟ್ಟಿಲ್ಲ. ಹೆಚ್ಚುವರಿ ಗನ್ ಮ್ಯಾನ್ ಕೊಟ್ಟಿಲ್ಲ. ನನಗೆ ಗನ್ ಮ್ಯಾನ್, ಕಾರು ಬೇಡ. ನನಗೆ ನೀಡಿರುವ ಓರ್ವ ಗನ್ ಮ್ಯಾನನ್ನೂ ವಾಪಸ್ ಕಳುಹಿಸುತ್ತೇನೆ ಎಂದರು.
ಹಕ್ಕುಚ್ಯುತಿ ಮಂಡಿಸುತ್ತೇನೆ:ನನ್ನ ಸ್ಥಾನಮಾನಕ್ಕೆ ತಕ್ಕುದಾಗಿ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಹೀಗಾಗಿ ನಾನು ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ನನಗೆ ಏನೂ ಬೇಕಾಗಿಲ್ಲ. ನನ್ನ ಹಕ್ಕಿಗೆ ಚ್ಯುತಿಯಾದರೆ ಯಾರು ಹೊಣೆ? ನನ್ನ ಮೇಲೆ ಹಗೆತನ ಯಾಕೆ? ನನಗೆ ಕೊಡಬೇಕಾದ ಸವಲತ್ತು ನೀಡಲು ಯಾವಾಗ ಸಭೆ ನಡೆಸುತ್ತೀರಿ? ಇದೆಲ್ಲಾ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಮನೆಗೆ ಸೆಕ್ಯೂರಿಟಿ ಕೊಟ್ಟಿಲ್ಲ. ನನ್ನ ಹಕ್ಕನ್ನು ನಾನು ಕೇಳ್ತಿದ್ದೇನೆ, ನನಗೆ ಜೀವ ಭಯ ಇಲ್ಲ. ನಾನು ಅಧಿಕಾರ ವಹಿಸಿಕೊಂಡು 20 ದಿನಗಳಾಗಿದೆ. ಆದರೆ, ಇಲ್ಲಿಯವರೆಗೆ ಎಸ್ಕಾರ್ಟ್ ಕೊಟ್ಟಿಲ್ಲ. ನನಗಿರುವ ಹಕ್ಕನ್ನುಕಿತ್ತುಕೊಳ್ಳಲು ಇವರ್ಯಾರು? ಸಚಿವರಾಗುತ್ತಲೇ ಎಸ್ಕಾರ್ಟ್ ಬರುತ್ತೆ, ಗನ್ ಮ್ಯಾನ್ ಬರುತ್ತೆ, ಕಾರು ಬಂದು ನಿಲ್ಲುತ್ತೆ. ಆದರೆ, ಇವರು ಇಲ್ಲಿ ತಾರತಮ್ಯ ಮಾಡ್ತಿದ್ದಾರೆ ಎಂದು ಹೇಳಿದರು.