ಮೈಸೂರು:ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರ ಫಲಾನುಭವಿಗೆ ಕೊಡುವ ಹಣ, ಬಳಿಕ ಅದೇ ಫಲಾನುಭವಿಯಿಂದ ಜಿಎಸ್‌ಟಿ ರೂಪದಲ್ಲಿ ವಸೂಲಿ ಮಾಡುವ ಹಣದ ಲೆಕ್ಕಾಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಹಿರಂಗ ಸಭೆಯಲ್ಲಿ ಸಾರ್ವಜನಿಕರ ಮುಂದೆ ತಮ್ಮದೇ ಶೈಲಿಯಲ್ಲಿ ಮಂಡಿಸಿದರು.
ಈ ಯೋಜನೆಯಲ್ಲಿ ಪ್ರತೀ ಫಲಾನುಭವಿಗೆ ಕೇಂದ್ರ ಸರ್ಕಾರ ಒಂದೂವರೆ ಲಕ್ಷ ರೂಪಾಯಿ ಕೊಡುತ್ತದೆ. ರಾಜ್ಯ ಸರ್ಕಾರ ಒಂದು ಲಕ್ಷ 28 ಸಾವಿರ ಕೊಡುತ್ತಿತ್ತು. ಉಳಿದ 3.80 ಲಕ್ಷ ರೂಪಾಯಿಯನ್ನು ಫಲಾನುಭವಿ ಕೊಡಬೇಕು. ಆಗ ಅವರಿಗೆ ಮನೆ ಸಿಗುತ್ತದೆ. ಆದರೆ ಕೇಂದ್ರ ಸರ್ಕಾರ ಪ್ರತೀ ಮನೆಗೆ 18% ಜಿಎಸ್‌ಟಿ ವಸೂಲಿ ಮಾಡುತ್ತದೆ. ಅಂದರೆ ಪ್ರತೀ ಕೊಳೆಗೇರಿ ಮನೆಗೆ 1 ಲಕ್ಷದ 38 ಸಾವಿರ ರೂಪಾಯಿಯನ್ನು ಜಿಎಸ್‌ಟಿ ಹೆಸರಲ್ಲಿ ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುತ್ತದೆ.
ಅಂದ್ರೆ ಒಂದೂವರೆ ಲಕ್ಷ ರೂಪಾಯಿ ಸಹಾಯಧನ ಕೊಟ್ಟು, ಅದರಲ್ಲಿ ಒಂದು ಲಕ್ಷದ 38 ಸಾವಿರ ರೂಪಾಯಿ ವಾಪಸ್ ವಸೂಲಿ ಮಾಡಿದರೆ ಕೇಂದ್ರ ಸರ್ಕಾರ ಎಷ್ಟು ಕೊಟ್ಟಂಗಾಯ್ತು? ಬರೀ 12 ಸಾವಿರ ರೂಪಾಯಿ ಮಾತ್ರ. ಬರೀ 12 ಸಾವಿರ ಕೊಟ್ಟು ಅದಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳಿದರು.
ಕೊಳೆಗೇರಿ ನಿವಾಸಿಗಳಿಂದಲೂ 18% GST ಸುಲಿಗೆ ಮಾಡುವ ಈ ಕ್ರಮ ನನಗೆ ಬಹಳ ಬೇಸರ ಆಯಿತು. ಹೀಗಾಗಿ ಪ್ರತೀ ಫಲಾನುಭವಿಗಳು ಕಟ್ಟಬೇಕಿದ್ದ ಅವರ ಪಾಲಿನ 3 ಲಕ್ಷ 80 ಸಾವಿರ ರೂಪಾಯಿಯಲ್ಲಿ ಒಂದು ಲಕ್ಷ ಮಾತ್ರ ಅವರಿಂದ ಕಟ್ಟಿಸಿಕೊಂಡು ಉಳಿದ ಹಣವನ್ನು ನಮ್ಮ ಸರ್ಕಾರದಿಂದಲೇ ಕಟ್ಟಿಸಲು ನಾನು ನಿರ್ಧರಿಸಿದೆ ಎಂದರು.