ಬೆಂಗಳೂರು:ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿ ಪತ್ತೆಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ಸಿಸಿಟಿವಿಯಲ್ಲಿ ಶಂಕಿತನ ಚಲನವಲನ ಸೆರೆಯಾಗಿದ್ದರೂ ಆತನನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಬಾಂಬ್ ಇಡುವ ಮುನ್ನ ಆರೋಪಿ ಬಿಎಂಟಿಸಿ ಬಸ್ನಲ್ಲಿ ಬಂದಿದ್ದ ಎಂಬುವುದು ಗೊತ್ತಾಗಿದೆ. ಹೀಗಾಗಿ ಆ ಅವಧಿಯಲ್ಲಿ ಸಂಚರಿಸಿದ ಸುಮಾರು 28 ಬಸ್ಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ರಾಮೇಶ್ವರಂ ಕೆಫೆ ರಸ್ತೆಯಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದನ್ನು ಅರಿತು ಶಂಕಿತ ಈ ದುಷ್ಕೃತ್ಯ ಎಸೆಗಿದ್ದಾನೆ. ಮುಖಕ್ಕೆ ಮಾಸ್ಕ್, ಕಣ್ಣಿಗೆ ಕನ್ನಡಕ ಹಾಕಿ, ತಲೆಗೆ ಟೋಪಿ ಹಾಕಿಕೊಂಡು ಬಂದಿದ್ದ ಶಂಕಿತ ಬ್ಯಾಗ್ ಇಟ್ಟುಕೊಂಡು ಹೊಟೇಲ್ ಪ್ರವೇಶಿಸಿದ್ದ. ಕೌಂಟರ್ನಲ್ಲಿ ರವೆ ಇಡ್ಲಿ ಆರ್ಡರ್ ಮಾಡುವಾಗಲೂ ಮೊಬೈಲ್ ಅನ್ನು ಟೇಬಲ್ ಮೇಲೆ ಇಟ್ಟಿದ್ದ ಮತ್ತು ಪದೇ ಪದೆ ಮೊಬೈಲ್ ಬಳಸುತ್ತಿರುವ ರೀತಿ ವರ್ತಿಸಿದ್ದ. ಆದರೆ, ನಿಜಕ್ಕೂ ಮೊಬೈಲ್ ಬಳಕೆಯಲ್ಲಿತ್ತಾ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಟವರ್ ಡಂಪ್ ಮಾಡಿ ಹುಡುಗಾಟ: ದುರ್ಘಟನೆ ಮುನ್ನ ಮೊಬೈಲ್ ಬಳಕೆ ಬಗ್ಗೆ ಟವರ್ ಡಂಪ್ ಮಾಡಿ ಶೋಧ ನಡೆಸಲಾಗುತ್ತಿದೆ. ಈ ವೇಳೆ ಆ್ಯಕ್ಟೀವ್ ಆಗಿದ್ದ ಸುಮಾರು 500ಕ್ಕೂ ಹೆಚ್ಚು ಮೊಬೈಲ್ ನಂಬರ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ನಿಜವಾಗಲೂ ಮೊಬೈಲ್ ಬಳಕೆ ಮಾಡುತ್ತಿದ್ದನಾ ಎಂಬ ಬಗ್ಗೆ ಪೊಲೀಸರಿಗೆ ಸಂಶಯ ವ್ಯಕ್ತವಾಗಿದೆ. ಏಕೆಂದರೆ ಹೊಟೇಲ್ ಸುತ್ತಮುತ್ತಲಿನ ರಸ್ತೆಯಲ್ಲಿ ಹೆಚ್ಚು ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದನ್ನ ಗಮನಿಸಿಯೇ ಕೃತ್ಯ ಎಸಗಿರುವ ಸಂದೇಹ ವ್ಯಕ್ತವಾಗಿದೆ. ವ್ಯವಸ್ಥಿತ ಸಂಚು ರೂಪಿಸಿ ಅರೋಪಿ ಬಾಂಬ್ ಇಟ್ಟಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಮೇಶ್ವರಂ ಕೆಫೆಗೆ ಎನ್ಎಸ್ಜಿ ಕಮಾಂಡೋ ತಂಡದ ಭೇಟಿ: ಮತ್ತೊಂದೆಡೆ, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಎನ್ಎಸ್ಜಿ ಕಮಾಂಡೋ ತಂಡ ಆಗಮಿಸಿ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ಬಾಂಬ್ ನಿಷ್ಕ್ರಿಯ ದಳದ ಜೊತೆ ಎನ್ಎಸ್ಜಿ ಹೊಟೇಲ್ ಹಾಗೂ ಸುತ್ತಮುತ್ತ ಎಲ್ಲ ಕಡೆ ತಪಾಸಣೆ ನಡೆಸುತ್ತಿದೆ. ತಮ್ಮದೇ ಆದ ಶೈಲಿಯಲ್ಲಿ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಸಿಸಿಬಿ ಪೊಲೀಸರಿಂದ ತನಿಖೆಗೆ ಪೂರಕವಾದ ಹೆಚ್ಚುವರಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಎನ್ಐಎಗೆ ಅಧಿಕೃತವಾಗಿ ಕೇಸ್ ಒಪ್ಪಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೆಫೆ ಸ್ಫೋಟ ಪ್ರಕರಣ: ಆರೋಪಿಯ ಟ್ರಾವೆಲ್ ಹಿಸ್ಟರಿ ಜಾಲಾಡುತ್ತಿರುವ ಖಾಕಿ ಪಡೆ; ಎನ್ಐಎಗೆ ಕೇಸ್ ಹಸ್ತಾಂತರ ಸಾಧ್ಯತೆ