ಧಾರವಾಡ: "ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಜಿಲ್ಲೆಯ 24 ಚೆಕ್ಪೋಸ್ಟ್ಗಳಲ್ಲಿ ಪ್ರತೀ ವಾಹನಗಳನ್ನೂ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಮೂರು ಚೆಕ್ಪೋಸ್ಟ್ಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಸರಿಯಾದ ದಾಖಲೆ ಹೊಂದಿರದ ಒಟ್ಟು 6,89,500 ರೂ. ನಗದು ಹಣವನ್ನು ಸೀಜ್ ಮಾಡಲಾಗಿದೆ" ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, "ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್ 16ರಿಂದ ಚೆಕ್ಪೋಸ್ಟ್ಗಳನ್ನು ತೆರೆದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅದರಲ್ಲೂ ಸಂಶಯಾಸ್ಪದ ವಾಹನಗಳನ್ನು ತಡೆದು, ತೀವ್ರತರವಾಗಿ ಅಧಿಕಾರಿಗಳಿಂದ ಪರಿಶೀಲಿಸಲಾಗುತ್ತಿದೆ. ಇಲ್ಲಿಯವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಮತ್ತು ಸರಿಯಾದ ದಾಖಲೆ ಹೊಂದಿರದ ಒಟ್ಟು 17,91,970 ರೂ. ನಗದು ವಶಕ್ಕೆ ಪಡೆದು, ಜಿಲ್ಲಾ ಖಜಾನೆಯಲ್ಲಿ ಠೇವಣಿ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಶೇರೆವಾಡ ಚೆಕ್ಪೋಸ್ಟ್ನಲ್ಲಿ ಸಿಕ್ಕಿದ್ದೆಷ್ಟು?: ಕುಂದಗೋಳ ಕ್ರಾಸ್ ಹತ್ತಿರ ತೆರೆದಿರುವ ಚೆಕ್ಪೋಸ್ಟ್ನಲ್ಲಿ ಗುರುವಾರ ಸಂಜೆ ಅದರಗುಂಚಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಕೆಎ-63 ಎನ್- 3173 ಎರಟಿಗಾ ಕಾರನ್ನು ತಪಾಸಣೆ ಮಾಡಲಾಯಿತು. ಆಗ ಅದರಲ್ಲಿ ಪ್ರಯಾಣಿಸುತ್ತಿದ್ದ ಅದರಗುಂಚಿ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಬೇಗೂರ ಅವರ ಬಳಿ ಸರಿಯಾದ ದಾಖಲೆ ಇಲ್ಲದ 2,10,000 ಹಣ ಪತ್ತೆಯಾಗಿದೆ. ಅವರು ಸರಿಯಾದ ದಾಖಲೆಯನ್ನು ನೀಡದ ಕಾರಣ ಮತ್ತು ಅಧಿಕಾರಿಗಳು ವಿಚಾರಿಸಿದಾಗ ಸಮಂಜಸ ಉತ್ತರ ನೀಡದಿರುವುದರಿಂದ ಅವರ ಹಣವನ್ನು ಜಪ್ತಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಸಿಪಿಐ ಮುರಗೇಶ ಚನ್ನನವರ, ಎಂಸಿಸಿ ನೋಡಲ್ ಅಧಿಕಾರಿ ಎಸ್.ವಿ.ಕುಲಕರ್ಣಿ ಹಾಗೂ ಎಪ್.ಎಸ್.ಟಿ ನೋಡಲ್ ಅಧಿಕಾರಿ ಅಶೋಕ ಕಲಕೇರಿ ಸೇರಿದಂತೆ ಹಲವರು ಇದ್ದರು.