ಬೆಂಗಳೂರು: ಮೊಬೈಲ್ ಬಿಡಿ ಭಾಗಗಳ ಮಾರಾಟಗಾರನ ಮೇಲೆ ಹಲ್ಲೆ ಖಂಡಿಸಿ ನಗರ್ತಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದ ಆರೋಪ ಸಂಬಂಧ ಮೂವರು ಸಂಸದರು, ಓರ್ವ ಶಾಸಕ ಸೇರಿದಂತೆ 43 ಮಂದಿ ವಿರುದ್ಧ ಹಲಸೂರು ಗೇಟ್ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚುನಾವಣಾ ಅಧಿಕಾರಿಗಳ ಸೂಚನೆ ಮೇರೆಗೆ ಇನ್ಸ್ಪೆಕ್ಟರ್ ಹನುಮಂತ ಕೆ.ಭಜಂತ್ರಿ ಅವರು ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ, ಶಾಸಕ ಸಿ.ಕೆ.ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಸಪ್ತಗಿರಿಗೌಡ ಸೇರಿದಂತೆ 43 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಜಮಾವಣೆಗೊಂಡು ಪ್ರತಿಭಟನೆ ಬಿಜೆಪಿ ನಡೆಸಿತ್ತು.
ನಗರ್ತಪೇಟೆಯ ಸಿದ್ದಣ್ಣಗಲ್ಲಿಯಲ್ಲಿ ಮೊಬೈಲ್ ಬಿಡಿ ಭಾಗಗಳ ಮಾರಾಟ ಅಂಗಡಿ ಇಟ್ಟುಕೊಂಡಿದ್ದ ಮುಕೇಶ್ ತನ್ನ ಅಂಗಡಿಯಲ್ಲಿ ಭಕ್ತಿಗೀತೆ ಸೌಂಡ್ ಕಡಿಮೆ ಮಾಡದ್ದಕ್ಕೆ ಅನ್ಯಕೋಮಿನವರು ಅಕ್ರೋಶಗೊಂಡು ಹಲ್ಲೆ ನಡೆಸಿದ್ದರು. ಬಳಿಕ ಮುಕೇಶ್ ನೀಡಿದ ದೂರಿನ ಮೇರೆಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಹಲ್ಲೆ ಖಂಡಿಸಿ ಬಿಜೆಪಿ ನಿಯೋಗ ಅನುಮತಿ ಪಡೆದುಕೊಳ್ಳದೆ ಸಿದ್ದಣ್ಣಗಲ್ಲಿಯಲ್ಲಿ ಸಾವಿರಾರು ಜನರನ್ನ ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದೇ ವೇಳೆ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರರನ್ನು ವಶಕ್ಕೆ ಪಡೆದುಕೊಂಡು ಬಿಡುಗಡೆಗೊಳಿಸಲಾಗಿತ್ತು. ಸದ್ಯ ಸುಮೊಟೊ ಪ್ರಕರಣ ದಾಖಲಿಸಿಕೊಂಡು 43 ಮಂದಿ ವಿರುದ್ಧ ಎಫ್ಐಅರ್ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.