ಬೆಂಗಳೂರು: "ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ಮಾರ್ಗ ನಿರ್ಮಾಣ, ನಗರದಲ್ಲಿ 250 ಅಡಿ ಎತ್ತರದ ಆಕಾಶ ಗೋಪುರ (sky deck) ನಿರ್ಮಾಣ, ಹೊಸದಾಗಿ 52 ಇಂದಿರಾ ಕ್ಯಾಂಟೀನ್ಗಳ ಸ್ಥಾಪನೆ ಸೇರಿದಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
"ನಗರದ ಹೆಬ್ಬಾಳ ಮೇಲ್ಸೇತುವೆ (ಎಸ್ಟೀಮ್ ಮಾಲ್) ಪ್ರದೇಶದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ನ ಮೇಲ್ಸೇತುವೆವರೆಗೆ ಸುರಂಗ ಮಾರ್ಗವನ್ನು 12,690 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಅದೇ ರೀತಿ ಬೆಂಗಳೂರು ನಗರದಲ್ಲಿ 250 ಅಡಿ ಎತ್ತರದ ಆಕಾಶ ಗೋಪುರವನ್ನು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಆದರೆ, ಜಾಗದ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ" ಎಂದು ಹೇಳಿದರು.
"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನವಾಗಿ 52 ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದೇ ರೀತಿ ಸಾಂಪ್ರದಾಯಿಕ ಬೀದಿದೀಪಗಳ ನಿರ್ವಹಣೆಯನ್ನು 'ಇಂಧನ ಉಳಿತಾಯ -ಇಎಂಐ/ ವಾರ್ಷಿಕ ಪಾವತಿ ಮಾದರಿ ' ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಯೋಜನೆ ಅಡಿಯಲ್ಲಿ ಎಲ್ಇಡಿ ಬೀದಿದೀಪಗಳನ್ನು ಅಳವಡಿಸುವ ಹಾಗೂ 7 ವರ್ಷಗಳ ನಿರ್ವಹಣಾ ವೆಚ್ಚ 684.34 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಹೊಂಬೆಳಕು ಯೋಜನೆಯಡಿ 50 ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಿದ್ದು, ಪ್ರಸ್ತುತ ವರ್ಷದಲ್ಲಿ 10 ಕೋಟಿ ರೂ.ಗಳಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ" ಎಂದು ಸಚಿವರು ವಿವರಿಸಿದರು.
ಕ್ಯಾಬಿನೆಟ್ನಲ್ಲಿ ಅನುಮೋದನೆಗೊಂಡ ಇತರ ವಿಷಯಗಳು: ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024 ಕ್ಕೆ ಅನುಮೋದನೆ. ಬಾಲ ಗರ್ಭಿಣಿಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಿವಿಧ ಇಲಾಖೆಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸುವುದು. 592 ಅಂಗನವಾಡಿ ಕೇಂದ್ರಗಳನ್ನು 85 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸುವ ಬಗ್ಗೆ ಒಪ್ಪಿಗೆ. ಮೆ.ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿ. (ಮೆ.ಮೈಸೂರು ಮಿನರಲ್ಸ್ ಲಿ.) ಸಂಸ್ಥೆಯ ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಸಾರ 1998, ಏ.1 ರಿಂದ 2005 ರ ಸೆ.30 ರವರೆಗಿನ ಅವಧಿಗೆ ವೇತನ ಬಾಕಿ, ಬಡ್ಡಿ ಇತ್ಯಾದಿಗಳನ್ನು ಪಾವತಿಸುವುದು. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (ತಿದ್ದುಪಡಿ) ನಿಯಮಗಳು, 2024 ಕ್ಕೆ ಅನುಮೋದನೆ ನೀಡಲಾಗಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ ಎಂಇ) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಕೇಂದ್ರ ಸರ್ಕಾರದ (ಆರ್ ಎಎಂಪಿ) ಕಾರ್ಯಕ್ರಮವನ್ನು (ಕೇಂದ್ರದ ಪಾಲು 118.72 ಕೋಟಿ ರೂ., ರಾಜ್ಯದ ಪಾಲು 29.25 ಕೋಟಿ ರೂ.) ರಾಜ್ಯದಲ್ಲಿ 147.87 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ.