ಬೆಂಗಳೂರು: "ಎಸ್ಸಿಪಿ ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವ ಕುರಿತು ವಾರದೊಳಗೆ ವರದಿ ಕೊಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಪತ್ರ ಬರೆದಿದೆ. ದೆಹಲಿಯಿಂದ ಬರೆದಿರುವ ಪತ್ರಕ್ಕೆ ಉತ್ತರ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ, ಸದನದ ಒಳಗಡೆಯೂ ನಾವು ಈ ವಿಚಾರದ ಕುರಿತು ಹೋರಾಟ ನಡೆಸುತ್ತೇವೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಅಹಿಂದ ನಾಯಕರು, ದಲಿತರ ಉದ್ಧಾರಕರು ಅಂತ ತಮ್ಮ ಬೆನ್ನು ತಾವೇ ತಟ್ಟಿಕೊಳ್ತಾರೆ. ತಮ್ಮ ಬಗ್ಗೆ ತಾವೇ ಕೊಚ್ಚಿಕೊಳ್ತಾರೆ. ಅಧಿಕಾರಕ್ಕೆ ಬರುತ್ತಿದ್ದಂತೆ ಎಸ್ಸಿಪಿ ಟಿಎಸ್ಪಿಗೆ ಮೀಸಲಿಟ್ಟಿದ್ದ ಹಣದಲ್ಲಿ 12 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿಕೊಂಡರು. 6 ತಿಂಗಳ ನಂತರ ಮತ್ತೆ 12.5 ಸಾವಿರ ಕೋಟಿ ಸೇರಿ ಒಟ್ಟು 24.5 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದೀರಿ. ದಲಿತರ ಉದ್ಧಾರಕ್ಕೋಸ್ಕರ ಇಟ್ಟಿರುವ ಹಣವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಿದ್ದೀರಿ ಎಂದು ಸ್ಪಷ್ಟವಾಗಿ ಆರೋಪ ಮಾಡಿದ್ದೆವು. ಈಗ ಎಸ್ಸಿ ರಾಷ್ಟ್ರೀಯ ಆಯೋಗದಿಂದ ರಾಜ್ಯಕ್ಕೆ ಈ ಸಂಬಂಧ ಪತ್ರ ಬಂದಿದೆ. ಇದಕ್ಕೆ ಸ್ಪಷ್ಟ ಉತ್ತರ ನೀಡಬೇಕು. ಇದು ರಾಜ್ಯ ಸರ್ಕಾರದ ಜವಾಬ್ದಾರಿ" ಎಂದರು.