ಹಾಸನ: "ರೈತರು ಉಳುಮೆ ಮಾಡುವ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ವಕ್ಫ್ ಬೋರ್ಡ್ ಮಾಡುತ್ತಿದ್ದು, ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಜಮೀರ್ ಅಹಮದ್ ಖಾನ್ ಮಾಡುತ್ತಿರುವುದು ದುರದೃಷ್ಠಕರ, ತಕ್ಷಣದಲ್ಲಿ ಸುಧಾರಿಸದೇ ಹೋದರೇ ಹಚ್ಚಿರುವ ಬೆಂಕಿ ಆರಿಸಲು ಸಾಧ್ಯವಾಗುವುದಿಲ್ಲ. ಮುಂದೆ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ" ಎಂದು ರಾಜ್ಯ ಸರಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಹಾಸನಾಂಬ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, "ಇವತ್ತು ಬೇಲಿನೇ ಎದ್ದು ಹೊಲ ಮೇಯ್ದಂತೆ ಆಗಿದೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಜಮೀರ್ ಮಾಡುತ್ತಿದ್ದಾರೆ. ಹಲವಾರು ದಶಕಗಳಿಂದ ರೈತರು ಉಳುಮೆ ಮಾಡುತ್ತಿದ್ದು, ಇದನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಜಮೀರ್ ಅಹಮದ್ ಮಾಡುತ್ತಿರುವುದು ದುರದೃಷ್ಠಕರ".
"ತಕ್ಷಣ ಇದನ್ನು ಸುಧಾರಿಸದೇ ಹೋದರೇ ನೀವು ಹಚ್ಚಿರುವ ಕಿಡಿ ರಾಜ್ಯಾದ್ಯಂತ ಬೆಂಕಿ ಹಚ್ಚಿಕೊಳ್ಳುತ್ತದೆ. ಅದನ್ನು ಆರಿಸಲು ಸಾಧ್ಯವಾಗುವುದಿಲ್ಲ ಈ ಸರಕಾರಕ್ಕೆ" ಎಂದು ಎಚ್ಚರಿಸಿ, "ಇಂತಹ ಕಿಚ್ಚು ಹಚ್ಚುವ ಕೆಲಸ ಬಿಟ್ಟು ದೇವರು ಮೆಚ್ಚುವ ಕೆಲಸ ಮಾಡಿದರೇ ಒಳ್ಳೆಯದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮನೆಗೆ ಅತಿಥಿಗಳು ಬಂದಾಗ ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಮನೆಯಿಂದ ಹೊರ ಹೋದ ಮೇಲೆ ಅದರ ಪ್ರಶ್ನೆಯೇ ಇಲ್ಲ. ಹೊರ ಹೋದ ಮೇಲೆ ಯಾರಾರು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಮಾಡುತ್ತಾರೆ. ಒಬ್ಬೊಬ್ಬರನ್ನೇ ಪಕ್ಷದಿಂದ ಹೊರ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ನಮ್ಮ ಪಕ್ಷ ಶುದ್ದೀಕರಣ ಆಗಬೇಕೆಂದು ಅನೇಕ ಹಿರಿಯರ ಒಂದು ಆಸೆ ಇತ್ತು. ಅವರ ಆಸೆಗೆ ತಕ್ಕಂತೆ ಶುದ್ದೀಕರಣ ಕೂಡ ಆಗುತ್ತಿದೆ. ಬರುವ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.