ಬೆಂಗಳೂರು:ಸಂಸದ ಬಿ ವೈ ರಾಘವೇಂದ್ರ ಪರ ಬ್ಯಾಟ್ ಬೀಸಿದ ದಾವಣಗೆರೆಯ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ.''ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪುನರಾಯ್ಕೆ ಆಗಬೇಕು ಎಂದು ನಮ್ಮ ಸಮಾಜದ ಮುಖಂಡರಾದ ಕಾಂಗ್ರೆಸ್ನ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಸಂತಸ ತಂದಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಶಾಮನೂರು ಶಿವಶಂಕರಪ್ಪ ಅವರು ನಮ್ಮ ಸಮಾಜದ ಹಿರಿಯ ಮುಖಂಡರು. ಅವರು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಮಾಡಿರುವ ಕೆಲಸ ಮೆಚ್ಚಿ ಅವರನ್ನು ಪುನರಾಯ್ಕೆ ಮಾಡಬೇಕೆಂದು ಹೇಳಿರೋದು ನಮ್ಮ ಸಮಾಜದ ಬಂಧುಗಳಿಗೆ, ಕಾರ್ಯಕರ್ತರಿಗೆ ಸಂತೋಷ ಉಂಟು ಮಾಡಿದೆ. ಶಾಮನೂರು ಅವರಂತಹ ಹಿರಿಯರು ಆಶೀರ್ವಾದ ಮಾಡಿರೋದು ಖುಷಿಯಾಗಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ'' ಎಂದರು.
''ಮತ್ತೆ ರಾಘವೇಂದ್ರನನ್ನೇ ಸಂಸದರನ್ನಾಗಿ ಆಯ್ಕೆ ಮಾಡಿ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಮಾಜಿ ಶಾಸಕ ಸಿ. ಟಿ. ರವಿ ಕೂಡ ಸ್ವಾಗತಿಸಿದ್ದಾರೆ. ರಾಘವೇಂದ್ರ ಪರ ಹೇಳಿಕೆ ನೀಡುವ ಮೂಲಕ ಅವರು ಮೋದಿಯನ್ನು ಒಪ್ಪಿದ್ದಾರೆ. ಮತ್ತೆ ಮೋದಿ ಪ್ರಧಾನಿ ಆಗಲಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಶಾಮನೂರು ಅವರ ಹೇಳಿಕೆಯಂತೆ ಮೋದಿಗೆ ಎಲ್ಲರೂ ಮತ ಹಾಕಬೇಕು. ಬಿಜೆಪಿ ಗೆಲ್ಲಿಸಬೇಕು, ಅಭಿವೃದ್ಧಿ ಆಗಬೇಕು ಎಂದರೆ, ಮೋದಿ ಬೇಕಲ್ಲ, ಮೋದಿ ಪ್ರಧಾನಿ ಆಗಬೇಕು ಎಂದರೆ ಮತ ಹಾಕಬೇಕು. ಹೀಗಾಗಿ ಬಿಜೆಪಿಗೆ ಮತ ಹಾಕಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಿ '' ಎಂದು ಮನವಿ ಮಾಡಿದರು.