ಬೆಂಗಳೂರು:ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ರಾಸಾಯನಿಕ ತ್ಯಾಜ್ಯದ ನೀರನ್ನು ಜಪಾನೀಸ್ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ವಿಶ್ವದ ಪ್ರಮುಖ ಪರಿಸರ ಸ್ನೇಹಿ ಕೈಗಾರಿಕಾ ಪ್ರದೇಶವನ್ನಾಗಿಸಲು ಬೆಂಗಳೂರು ಜಲಮಂಡಳಿ ಮುಂದಾಗಿದೆ.
ಮಂಗಳವಾರ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಜಲಮಂಡಳಿಯಿಂದ ವಿಶೇಷವಾಗಿ ಆಹ್ವಾನಿಸಲಾಗಿದ್ದ ಜಪಾನ್ ಮೂಲದ ತಂತ್ರಜ್ಞಾನ ಸಂಸ್ಥೆಯ ಪ್ರತಿನಿಧಿಯೊಂದಿಗೆ ಭೇಟಿ ನೀಡಿದ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ತ್ಯಾಜ್ಯ ನೀರು ಉತ್ಪಾದನೆ ಹಾಗೂ ಅದರ ನಿರ್ವಹಣೆಯ ಬಗ್ಗೆ ವಿಸ್ತ್ರುತ ಮಾಹಿತಿ ಪಡೆದುಕೊಂಡರು.
ಪೀಣ್ಯ ಕೈಗಾರಿಕಾ ಪ್ರದೇಶ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ಹಲವಾರು ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯದ ನೀರನ್ನು ಉತ್ಪತ್ತಿ ಮಾಡುತ್ತವೆ. ಕೆಲವು ದೊಡ್ಡ ಸಂಸ್ಥೆಗಳು ತಮ್ಮದೇ ಆದ ಇ.ಟಿ.ಪಿಯನ್ನು ಹೊಂದಿದ್ದು ಅದರ ಮೂಲಕ ಸಂಸ್ಕರಣೆ ಮಾಡುತ್ತಿವೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿರುವಂತಹ ಹಲವಾರು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು, ತಮ್ಮದೇ ಆದ ಸಂಸ್ಕರಣಾ ವ್ಯವಸ್ಥೆಯನ್ನು ಹೊಂದದೇ ಬೇರೆ ಮಾರ್ಗಗಳ ಮೂಲಕ ತ್ಯಾಜ್ಯ ನೀರು ವಿಲೇವಾರಿ ಮಾಡುತ್ತಿವೆ ಎಂದು ಈ ಸಂದರ್ಭದಲ್ಲಿ ರಾಮ್ ಪ್ರಸಾತ್ ಮನೋಹರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಜತೆಗೆ, ಇದು ಹೆಚ್ಚು ಖರ್ಚು ಆಗುವ ವ್ಯವಸ್ಥೆಯಾಗಿದೆ. ಅಲ್ಲದೇ, ನೀರಿಗೆ ಹೆಚ್ಚಿನ ಖರ್ಚು ಭರಿಸುವುದರ ಮೂಲಕ ಉದ್ದಿಮೆಗಳು ತಮ್ಮ ಲಾಭದ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಸಂಸ್ಕರಣೆ ಇಲ್ಲದೇ ಭೂಮಿಗೆ ಸೇರುವ ಕಲುಷಿತ ನೀರಿನಿಂದ ಜಲಮೂಲಗಳು ಹಾಗೂ ಅಂತರ್ಜಲ ಕಲುಷಿತವಾಗುತ್ತಿದೆ.