ಕರ್ನಾಟಕ

karnataka

ಗಿಗ್ ಕಾರ್ಮಿಕರ ಮಸೂದೆ ಸಂಬಂಧ ವಿಸ್ತೃತ ಸಮಾಲೋಚನೆ ಮಾಡುವಂತೆ ಸಿಎಂಗೆ ಉದ್ಯಮಿಗಳ ಮನವಿ: ಸಚಿವ ಖರ್ಗೆ - Businessmens request to CM

By ETV Bharat Karnataka Team

Published : Jul 12, 2024, 5:06 PM IST

ನವೆಂಬರ್​ 19-21ವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ 2024 ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಉದ್ಯಮಿಗಳ ಜೊತೆ ಸಂವಾದ ನಡೆಸಿದರು.

Minister Priyank Kharge
ಸಚಿವ ಪ್ರಿಯಾಂಕ ಖರ್ಗೆ (ETV Bharat)

ಬೆಂಗಳೂರು: ಗಿಗ್ ಕಾರ್ಮಿಕರ ಮಸೂದೆ ಸಂಬಂಧ ವಿಸ್ತರಿತ ಸಮಾಲೋಚನೆ ಮಾಡುವಂತೆ ರೌಂಡ್ ಟೇಬಲ್ ಸಂವಾದ ವೇಳೆ ಸಿಎಂಗೆ ಉದ್ಯಮಿಗಳು ಮನವಿ ಮಾಡಿರುವುದಾಗಿ ಐಟಿ, ಬಿಟಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಖಾಸಗಿ ಹೊಟೇಲ್‌ನಲ್ಲಿ ಟೆಕ್ ಸಮ್ಮಿಟ್ ಸಂಬಂಧ ಉದ್ಯಮಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಂವಾದದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ, "ಸಂವಾದದಲ್ಲಿ ಸುಮಾರು 200+ ಸಿಇಒ, ಎಂಡಿಗಳು ಪಾಲ್ಗೊಂಡಿದ್ದರು. ಅವರಿಗೆ ತೆಗೆದುಕೊಂಡಿರುವ ಕ್ರಮದ ವರದಿಯನ್ನು ನಾವು ನೀಡಿದ್ದೇವೆ. ಗಿಗ್ ವರ್ಕರ್ಸ್ ಮಸೂದೆ ಬಗ್ಗೆ ಮಾತನಾಡಿದ್ದೇವೆ. ಅದರ ಬಗ್ಗೆ ವಿಸ್ತೃತ ಚರ್ಚೆ ಆಗಬೇಕು ಎಂದು ಮನವಿ ಮಾಡಿದ್ದಾರೆ. ವಿಸ್ತೃತ ಚರ್ಚೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಮಸೂದೆ ಸಂಬಂಧ ಕೆಲ ಸಂಸ್ಥೆಗಳ ಜೊತೆ ಸಮಾಲೋಚನೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಸೂದೆ ಬಗ್ಗೆ ಯಾರೂ ವಿರೋಧ ಮಾಡಿಲ್ಲ. ಸಂಸ್ಥೆಗಳಿಗೂ ಮಸೂದೆಯಿಂದ ಸಮಸ್ಯೆ ಆಗಲ್ಲ‌‌. ಸಂಸ್ಥೆಗಳು ಹೆಚ್ಚಿನ ಸಮಾಲೋಚನೆ ಮಾಡಿ ಮಸೂದೆ ರೂಪಿಸುವಂತೆ ಸಲಹೆ ನೀಡಿವೆ. ಸರ್ಕಾರ ಗಿಗ್ ಕಾರ್ಮಿಕರ ಹಿತ ರಕ್ಷಣೆಗೆ ಬದ್ಧವಾಗಿದೆ" ಎಂದರು.

ಉದ್ಯಮವಾರು ನೀತಿ ರೂಪಿಸುವ ಬಗ್ಗೆ ಚರ್ಚೆ:"ಉದ್ಯಮಿಗಳ ಜೊತೆಗಿನ ಸಂವಾದದ ವೇಳೆ ಸ್ಪೇಸ್ ಟೆಕ್ ನೀತಿ, ಜಿಸಿಸಿ ನೀತಿ, ಸೆಮಿಕಂಡಕ್ಟರ್ ನೀತಿ, ಕ್ಷೇತ್ರವಾರು ನೀತಿ ತರುವ ಬಗ್ಗೆ ತಿಳಿಸಲಾಗಿದೆ. ನವೋದ್ಯಮ ಕ್ಷೇತ್ರವಾರು ನೀತಿ ರೂಪಿಸುವ ಸಂಬಂಧ ಹಲವು ಸಲಹೆ, ಅಭಿಪ್ರಾಯಗಳನ್ನು ಉದ್ಯಮಿಗಳು ತಿಳಿಸಿದ್ದಾರೆ. ಅದನ್ನು ಅನುಷ್ಠಾನ ಮಾಡಲಿದ್ದೇವೆ" ಎಂದರು.

"ನವೆಂಬರ್ ವೇಳೆಗೆ ಈ ಎಲ್ಲ ನೀತಿಗಳನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಆ ಮೂಲಕ ಸ್ಟಾರ್ಟ್ ಅಪ್, ತಂತ್ರಜ್ಞಾನ ಆಧಾರಿತ ಉದ್ಯಮವಾರು ಇಕೋ ಸಿಸ್ಟಮ್ ಸೃಷ್ಟಿಸಲು ಸರ್ಕಾರ ಮುಂದಾಗಿದೆ. ನವೆಂಬರ್ ವೇಳೆಗೆ ಹೆಚ್ಚಿನ ಅನುಕೂಲಕರ ನೀತಿ ತಂದು ಬಂಡವಾಳ ಹೂಡಿಕೆಗಳು, ಹೆಚ್ಚಿನ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ" ಎಂದು ತಿಳಿಸಿದರು.

"ಸಂವಾದ ವೇಳೆ ಬೆಂಗಳೂರಲ್ಲಿ ಗ್ಲೋಬಲ್ ಟೈ ಸಮ್ಮಿಟ್ ನಡೆಸಲು ನಿರ್ಧರಿಸಲಾಗಿದೆ. ಸುಮಾರು 15,000 ಸ್ಟಾರ್ಟ್ ಅಪ್ ಕಂಪನಿಗಳು ಈ ಸಮ್ಮಿಟ್​ನಲ್ಲಿ ಒಟ್ಟಾಗಲಿವೆ. ಆ ಮೂಲಕ ನವೋದ್ಯಮ, ತಂತ್ರಜ್ಞಾನ ಆಧಾರಿತ ಉದ್ಯಮಗಳ ಸಂಬಂಧ ಹೊಸ ಅಭಿಪ್ರಾಯ ವಿನಿಮಯ, ಚಿಂತನ ಮಂಥನ ನಡೆಯಲಿದೆ. ಅದರ ಜೊತೆಗೆ ಅರ್ಬನ್ ಸೊಲ್ಯುಷನ್ ಸಮ್ಮಿಟ್ ಹಾಗೂ ರೂರಲ್ ಸೊಲ್ಯುಷನ್ ಸಮ್ಮಿಟ್ ಮಾಡಲು ನಿರ್ಧಾರ ಮಾಡಲಾಗಿದೆ. ಆ ಮೂಲಕ ಸಂಚಾರ ದಟ್ಟಣೆ, ಕುಡಿಯುವ ನೀರು, ಕಸದ ಸಮಸ್ಯೆ ಬಗ್ಗೆ ಪರಿಹಾರ ಹುಡುಕಲು ಇದು ಸಹಕಾರಿಯಾಗಲಿದೆ" ಎಂದು ತಿಳಿಸಿದರು.

ನ.19-21 ವರೆಗೆ ಬೆಂಗಳೂರಲ್ಲಿ ಟೆಕ್ ಸಮ್ಮಿಟ್:"ನವೆಂಬರ್​ 19-21ವರೆಗೆ ಬೆಂಗಳೂರು ಅರಮನೆಯಲ್ಲಿ ಬೆಂಗಳೂರು ಟೆಕ್ ಸಮ್ಮಿಟ್ 2024 ನಡೆಯಲಿದೆ. ಈ ಬಾರಿ ಅನ್ಬೌಂಡ್ ಥೀಮ್​ನೊಂದಿಗೆ ಬಿಟಿಎಸ್ 2024 ಮಾಡಲು ಉದ್ದೇಶಿಸಲಾಗಿದೆ. ಬಿಟಿಎಸ್ 2024 ನಲ್ಲಿ 40+ ದೇಶಗಳ 460+ ಭಾಷಣಕಾರರು, 85ಕ್ಕೂ ಹೆಚ್ಚು ಸೆಷನ್‌ಗಳು, 5000+ ಪ್ರತಿನಿಧಿಗಳು, 500+ ನವೋದ್ಯಮಗಳು, 700+ ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 50,000+ ವೀಕ್ಷಕರು ಭೇಟಿ ನೀಡುವ ಸಾಧ್ಯತೆಗಳಿವೆ. ಈ ಬಾರಿ ಟೆಕ್ ಸಮ್ಮಿಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. 31 ದೇಶಗಳು ಬಿಟಿಎಸ್ 2024ರಲ್ಲಿ ಪಾಲ್ಗೊಳ್ಳಲಿದೆ."

ನಮಗೆ ತಮಿಳುನಾಡು ಸ್ವಲ್ಪ ಸರ್ಧೆ ನೀಡುತ್ತಿದೆ:ಕರ್ನಾಟಕ ಯಾವುದೇ ರಾಜ್ಯದ ಜೊತೆ ಸ್ಪರ್ಧಿಸುತ್ತಿಲ್ಲ. ನಾವು ಜಾಗತಿಕವಾಗಿ ಸ್ಪರ್ಧಿಸುವ ರಾಜ್ಯವಾಗಿದ್ದೇವೆ. ತೆಲಂಗಾಣ ರಾಜ್ಯದ ಶೋ ಚೆನ್ನಾಗಿತ್ತು. ಅವರಿಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದಲ್ಲಿನ ಹೂಡಿಕೆ ಪ್ರಗತಿ ಶೇ 27ರಷ್ಟು ಇದ್ದರೆ, ತೆಲಂಗಾಣದಲ್ಲಿ ಶೇ 30ರಷ್ಟು ಬೆಳವಣಿಗೆ ಇದೆ. ತಮಿಳುನಾಡು ನಮಗೆ ಸ್ವಲ್ಪ ಹೆಚ್ಚು ಸ್ಪರ್ಧೆ ನೀಡುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ - ಪ್ರಿಯಾಂಕ್ ಖರ್ಗೆ ಭೇಟಿ; ಜಿಐಎಫ್​​ಟಿ ಸಿಟಿ ರಚನೆಗೆ ಪ್ರಸ್ತಾವನೆ - Priyank Kharge

ABOUT THE AUTHOR

...view details