ನವದೆಹಲಿ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಪ್ರಮುಖ ದಾಖಲೆಗಳು ಮರೆಯಾಗಿದ್ದರ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಿಬಿಐ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ಸೋಮವಾರ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡುವ ಮುನ್ನದ ಪ್ರಮುಖ ದಾಖಲೆಯನ್ನು ಕೇಳಿತು. ಸಿಬಿಐ ಮತ್ತು ಪಶ್ಚಿಮಬಂಗಾಳ ಸರ್ಕಾರ ಈ ದಾಖಲೆಯನ್ನು ನೀಡದ ಕಾರಣ, ಅಸಮಾಧಾನ ವ್ಯಕ್ತಪಡಿಸಿತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡುವಾಗ ಚಲನ್ (ದಾಖಲೆ) ನೀಡಲಾಗುತ್ತದೆ. ಈ ವೇಳೆ ಶವದ ಮೇಲಿನ ಬಟ್ಟೆ, ಇತರ ವಸ್ತುಗಳನ್ನು ಹಾಜರುಪಡಿಸಲಾಗಿದೆಯೇ ಎಂಬುದನ್ನು ಆ ದಾಖಲೆ ವಿವರಿಸುತ್ತದೆ. ಅದನ್ನು ಕೋರ್ಟ್ಗೆ ನೀಡಿಲ್ಲ ಏಕೆ ಎಂದು ಪೀಠ ಪ್ರಶ್ನಿಸಿತು.
ಸಿಬಿಐ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿ, ಚಲನ್ ತಮ್ಮ ದಾಖಲೆಗಳ ಭಾಗವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ತಕ್ಷಣವೇ ಆ ದಾಖಲೆಯನ್ನು ನೀಡಲು ಸಾಧ್ಯವಾಗಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲು ಸಮಯ ನೀಡಬೇಕು ಎಂದು ಕೇಳಿದರು.
ಸಾಕ್ಷ್ಯಾಧಾರ ನಾಶ ಶಂಕೆ: ವೈದ್ಯೆಯ ಶವ ಪತ್ತೆಯಾದ ಮರುದಿನವೇ ಘಟನಾ ಸ್ಥಳವಾದ ಸೆಮಿನಾರ್ ಹಾಲ್ ಬಳಿಯ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ಕೆಡವಲು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಆದೇಶಿಸಿದ್ದರು. ಹೀಗಾಗಿ ಪ್ರಮುಖ ಸಾಕ್ಷ್ಯಾಧಾರಗಳು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ ಸಿಬಿಐ ಇದೇ ವೇಳೆ ಕೋರ್ಟ್ಗೆ ಹೇಳಿತು.
ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದಲೇ ಅಧಿಕಾರಿಗಳು ಶೀಘ್ರ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳು, ವಿಚಾರಣೆಯಲ್ಲಿ ದೊರೆತ ವಿವರಗಳು, ಡಿಎನ್ಎ ಪರೀಕ್ಷೆಯ ಪ್ರಕಾರ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ತಿಳಿದುಬಂದಿದೆ. ಪ್ರಮುಖ ಆರೋಪಿ ಸಂಜಯ್ ರಾಯ್ನ ಪಾತ್ರವನ್ನು ಫೋರೆನ್ಸಿಕ್ ಪರೀಕ್ಷೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ.
ಮೃತ ವೈದ್ಯೆಯ ಚಿತ್ರ ಅಳಿಸಿ: ಸಾಮಾಜಿಕ ಜಾಲತಾಣಗಳಲ್ಲಿ ಮೃತ ವೈದ್ಯೆ ವಿದ್ಯಾರ್ಥಿನಿಯ ಚಿತ್ರಗಳು ಹರಿದಾಡುತ್ತಿದ್ದಕ್ಕೆ ಕೋರ್ಟ್ ಕಿಡಿಕಾರಿತು. ಮೃತರ ಘನತೆ ಮತ್ತು ಗೌಪ್ಯತೆಯನ್ನು ಕಾಪಾಡುವುದು ಸಮಾಜದ ಕರ್ತವ್ಯ. ತಕ್ಷಣವೇ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತೆಯ ಫೋಟೋಗಳನ್ನು ಅಳಿಸಿ ಹಾಕುವಂತೆ ನಿರ್ದೇಶಿಸಿತು.