ಬೆಂಗಳೂರು: ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಕನ್ನಡಿಗರೇ ಮೇಯರ್ ಆಗಿರಬೇಕು ಎನ್ನುವುದು ಬಿಜೆಪಿಯ ನಿಲುವಾಗಿದ್ದು, ಗ್ರೇಟರ್ ಬೆಂಗಳೂರು ಬಿಲ್ನಲ್ಲಿನ ಲೋಪ ಸರಿಪಡಿಸದೇ ಇದ್ದಲ್ಲಿ ನಾವು ಜನರ ಮುಂದೆ ಹೋಗುತ್ತೇವೆ, ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ವಿದ್ಯಾ ಭವನದಲ್ಲಿಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಾಧಕ, ಬಾಧಕಗಳ ಬಗ್ಗೆ ತಿಳಿದುಕೊಳ್ಳಲು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರೇಟರ್ ಬೆಂಗಳೂರು ಬಿಲ್‌ನಿಂದ ಬೆಂಗಳೂರಿಗಾಗುವ ಅನುಕೂಲತೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ತಜ್ಞರಿಂದ ಕೊಟ್ಟ ವರದಿಯ ಬಗ್ಗೆ ಸಂವಾದ ಮಾಡಿದ್ದೇವೆ. ಒಳ್ಳೆಯದು, ಕೆಟ್ಟದರ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿದ್ದೇವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಂದಾಗಿರಬೇಕು. ಕನ್ನಡಿಗರೇ ಮೇಯರ್ ಆಗಿರಬೇಕು. ಹಾಗಾಗಿ, ಸರ್ಕಾರದ ಪ್ರಸ್ತಾವನೆಯಾಗಿರುವ ಐದು ವಿಭಾಗವನ್ನು ನಾವು ವಿರೋಧ ಮಾಡುತ್ತೇವೆ ಎಂದರು.
ಬಿಬಿಎಂಪಿ ವ್ಯಾಪ್ತಿಯೊಳಗೆ ಎಲ್ಲವೂ ಇರಬೇಕು. ಹೆಚ್ಚು ಇಲಾಖೆಗಳು ಬರೋದ್ರಿಂದ ಹೆಚ್ಚು ಆಫೀಸ್ಗಳು ಬೇಕಾಗುತ್ತವೆ. ಸ್ಲಂ ಬೋರ್ಡ್, ವಾಟರ್ ಸಪ್ಲೈ ಎಲ್ಲವೂ ಒಂದೇ ಕಡೆ ಇರಬೇಕು. 74ನೇ ವಿಧಿ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಕೊಟ್ಟಿದೆ. ಆದರೆ ಸರ್ಕಾರ ಮಾಡುತ್ತಿರುವ ಸರಿಯಲ್ಲ, ಐದು ವಿಭಾಗ ಮಾಡಿ ಇದಕ್ಕೆ ಸಿಎಂರನ್ನು ಚೇರ್ಮನ್ ಮಾಡಲಾಗಿದೆ, ಇದು ಸರಿಯಲ್ಲ. ಸಿಎಂಗೆ ರಾಜ್ಯದಲ್ಲಿ ಬೇರೆ ಬೇರೆ ಕೆಲಸ ಇರುತ್ತದೆ. ಈ ರೀತಿ ಮಾಡಿದರೆ ಅಭಿವೃದ್ಧಿ ಕುಂಠಿತ ಆಗುತ್ತದೆ. ಇದರಲ್ಲಿನ ಲೋಪಗಳನ್ನು ಬದಲಾವಣೆ ಮಾಡಬೇಕು ಎಂದು ಹೇಳಿದರು.
ಈ ಬಿಲ್ ಸಮಿತಿಯೊಳಗೆ ನಮ್ಮ ಸದಸ್ಯರು ಕೂಡ ಇದ್ದಾರೆ. ಬೆಂಗಳೂರಿನ ಸಮಗ್ರ ಬೆಳವಣಿಗೆಗೆ ಏನು ಮಾಡಬೇಕೋ ಅದನ್ನು ಮಾಡಬೇಕು. ಹಿಂದೆ ಇದ್ದ 198 ವಾರ್ಡ್ಗೆ ಚುನಾವಣೆ ನಡೆಸಬೇಕು. ನಮಗೂ ಅಧಿಕಾರ ಇದೆ, ಪ್ರತಿಪಕ್ಷವಾಗಿ ನಮ್ಮ ಸಲಹೆಗಳನ್ನು ಸರ್ಕಾರ ಪರಿಗಣಿಸಿಲ್ಲ ಅಂದರೆ ಅದನ್ನು ಜನರು ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಸೂದೆಯಲ್ಲಿ ಒಂದಷ್ಟು ಲೋಪಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಈ ಬಿಲ್ ಪಾಸ್ ಮಾಡಿಕೊಳ್ಳೋದು ನಿಧಾನ ಆದರೆ, 198 ವಾರ್ಡ್ಗಳಿಗೇ ಚುನಾವಣೆ ನಡೆಸಲಿ. ಆದರೆ ಆದಷ್ಟು ಬೇಗ ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ನಡೆಸಲಿ. ಪಾಲಿಕೆ ಚುನಾವಣೆ ವಿಳಂಬಕ್ಕೆ ಈ ಬಿಲ್ ಕಾರಣ ಕೊಡ್ತಿದೆ ಸರ್ಕಾರ. ಸರ್ಕಾರ ಬೇಗ ಚುನಾವಣೆ ನಡೆಸಲಿ ಅನ್ನೋದು ಬಿಜೆಪಿ, ಜೆಡಿಎಸ್ ಆಗ್ರಹ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಸ್ಸಾಂ ಬುಡಕಟ್ಟು ಜನರ ಹಬ್ಬ ರದ್ದು: ಆಯೋಜಕರ ವಿರುದ್ಧ ಎಫ್ಐಆರ್ - Karma Puja Festival