Hero Destini 125: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪೆನಿ ಹೀರೋ ಮೋಟೋಕಾರ್ಪ್ ಸುದೀರ್ಘ ಕಾಯುವಿಕೆಯ ನಂತರ ಇದೀಗ ತನ್ನ ಪ್ರಸಿದ್ಧ ಸ್ಕೂಟರ್ ಹೀರೋ ಡೆಸ್ಟಿನಿ 125ನ ಹೊಸ ಅಪ್ಡೇಟ್ ಮಾದರಿಯನ್ನು ಅನಾವರಣಗೊಳಿಸಿದೆ. ಈ ಸ್ಕೂಟರ್ ಸುಮಾರು 6 ವರ್ಷಗಳ ನಂತರ ಪ್ರಮುಖ ಅಪ್ಡೇಟ್ ಪಡೆದಿರುವುವುದು ವಿಶೇಷ. ಹೊಸ ಹೀರೋ ಡೆಸ್ಟಿನಿಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಇದು ಈ ಹಿಂದಿನ ಮಾದರಿಗಿಂತ ಉತ್ತಮವಾಗಿದೆ. 3 ವಿಭಿನ್ನ ರೂಪಾಂತರಗಳಲ್ಲಿ ಬರುತ್ತಿರುವ ಸ್ಕೂಟರ್ ಮುಖ್ಯವಾಗಿ ಹೋಂಡಾ ಆ್ಯಕ್ಟಿವಾ 125ರೊಂದಿಗೆ ಸ್ಪರ್ಧಿಸಲಿದೆ.
Hero Destini 125 ವೇರಿಯಂಟ್ಸ್: ಹೊಸ ಡೆಸ್ಟಿನಿಯನ್ನು VX, ZX ಮತ್ತು ZX Plus ಎಂಬ ಮೂರು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಬೇಸ್ VX ರೂಪಾಂತರವು ಮುಂಭಾಗದ ಡ್ರಮ್ ಬ್ರೇಕ್ಗಳನ್ನು ಹೊಂದಿದೆ. ಸಣ್ಣ LCD ಇನ್ಸೆಟ್ನೊಂದಿಗೆ ಸರಳ ಅನಲಾಗ್ ಡ್ಯಾಶ್. i3s ಇಂಧನ ಉಳಿಸುವ ಸ್ಟಾಟರ್/ಸ್ಟಾಪ್ ತಂತ್ರಜ್ಞಾನವನ್ನು ಈ ರೂಪಾಂತರದಲ್ಲಿ ಒದಗಿಸಿಲ್ಲ.
ಮಿಡ್-ಸ್ಪೆಕ್ ZX ರೂಪಾಂತರವು ಸ್ವಲ್ಪ ಉತ್ತಮವಾದ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ZX ರೂಪಾಂತರವು ಬ್ಲೂಟೂತ್-ಕನೆಕ್ಟಿವಿಟಿ, ಬ್ಯಾಕ್‌ಲಿಟ್ ಸ್ಟಾರ್ಟರ್ ಬಟನ್, ಫ್ರಂಟ್ ಡಿಸ್ಕ್ ಬ್ರೇಕ್, ಪಿಲಿಯನ್ ಬ್ಯಾಕ್‌ರೆಸ್ಟ್ ಮತ್ತು ಆಟೋ ಕ್ಯಾನ್ಸ್ಲಿಂಗ್ ಇಂಡಿಗೇಟರ್ನೊಂದಿಗೆ ಡಿಜಿಟಲ್ ಡ್ಯಾಶ್ ಬೋರ್ಡ್ ಹೊಂದಿದೆ. ಈ ವಿಭಾಗದಲ್ಲಿ ಮೊದಲ ಬಾರಿಗೆ ಈ ವೈಶಿಷ್ಟ್ಯವನ್ನು ಒದಗಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಟಾಪ್-ಸ್ಪೆಕ್ ವೇರಿಯಂಟ್ ZX+: ಇದರಲ್ಲಿ ಕ್ರೋಮ್ ಉಚ್ಚಾರಣೆ, ಅಲಯ್ ವ್ಹೀಲ್ಗಳ ಡಿಸೈನ್ ಅನ್ನು ಸುಂದರವಾಗಿ ಮಾಡಲಾಗಿದೆ. ಸ್ಕೂಟರ್‌ನಲ್ಲಿ 124.6 ಸಿಸಿ ಸಾಮರ್ಥ್ಯದ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಸಲಾಗಿದೆ. ಇದು 7,000 rpm ನಲ್ಲಿ 9hp ಮತ್ತು 5,500 rpmನಲ್ಲಿ 10.4Nm ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್ ಒಂದು ಲೀಟರ್ ಪೆಟ್ರೋಲ್‌ನಲ್ಲಿ 59 ಕಿ.ಮೀ ವರೆಗೆ ಪ್ರಯಾಣಿಸಬಲ್ಲದು ಎಂದು ಹೀರೋ ಮೋಟೊಕಾರ್ಪ್ ಮಾಹಿತಿ ನೀಡಿದೆ. ಈ ಮೈಲೇಜ್ ಅನ್ನು ICAT ಪ್ರಮಾಣೀಕರಿಸಿದೆ.
ಈ ವೈಶಿಷ್ಟ್ಯಗಳು ಲಭ್ಯ: ಕಂಪನಿಯು ಕಾಂಬಿ ಬ್ರೇಕಿಂಗ್ ಸಿಸ್ಟಮ್ (CBS) ಅನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಿದೆ. ಇದಲ್ಲದೆ, ಎಂಜಿನ್ ಕಟ್-ಆಫ್, ಬೂಟ್ ಲೈಟಿಂಗ್ (ಸೀಟ್ ಕೆಳಗಿನ ಸ್ಟೋರೇಜ್‌ನಲ್ಲಿ ಲೈಟಿನ ವ್ಯವಸ್ಥೆ), ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೀಟಿನ ಕೆಳಗೆ 19 ಲೀಟರ್ ಸಂಗ್ರಹಣೆ ಮತ್ತು ಮುಂಭಾಗದ ಏಪ್ರನ್‌ನಲ್ಲಿ 2 ಲೀಟರ್ ಸ್ಟೋರೇಜ್ ಸ್ಥಳ ಲಭ್ಯವಿದೆ. ಕಂಪನಿಯು ತನ್ನ ಮುಂಭಾಗದ ಏಪ್ರನ್‌ನಲ್ಲಿ ಹುಕ್ ಒದಗಿಸಿದೆ. ಇದು 3 ಕೆ.ಜಿಯಷ್ಟು ಭಾರ ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.
ನೋಟ ಮತ್ತು ವಿನ್ಯಾಸದ ಹೊರತಾಗಿ ಈ ಸ್ಕೂಟರ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದು ಎರಡೂ ಬದಿಗಳಲ್ಲಿ 12 ಇಂಚಿನ ವ್ಹೀಲ್ಗಳನ್ನು ಹೊಂದಿದೆ. ಹೊಸ ಚಕ್ರಗಳ ಕಾರಣ ಡೆಸ್ಟಿನಿ 125ರ ವೀಲ್‌ಬೇಸ್ 57 ಎಂಎಂ ಹೆಚ್ಚಾಗಿದೆ. ಇದರ ZX ಮತ್ತು ZX+ ರೂಪಾಂತರಗಳಲ್ಲಿ 190 mm ಫ್ರಂಟ್ ಡಿಸ್ಕ್ ಬ್ರೇಕ್ ಬಳಸಲಾಗಿದೆ. ಇದೇ ಮೊದಲ ಬಾರಿಗೆ ಡೆಸ್ಟಿನಿ 125 ನಲ್ಲಿ ಈ ಬ್ರೇಕ್ ಅನ್ನು ಒದಗಿಸಲಾಗಿದೆ. ಆದರೆ ಮೂಲ VX ರೂಪಾಂತರವು 130 mm ಡ್ರಮ್ ಬ್ರೇಕ್ ಹೊಂದಿದೆ.
ಬೆಲೆ ಎಷ್ಟು?: ಇಲ್ಲಿಯವರೆಗೆ ಹೀರೋ ಮೋಟೋಕಾರ್ಪ್ ಈ ಸ್ಕೂಟರ್ ಅನ್ನು ಮಾತ್ರ ಪ್ರದರ್ಶಿಸಿದೆ. ಇದರ ಬೆಲೆಗಳನ್ನು ಪ್ರಕಟಿಸಲಾಗಿಲ್ಲ. ಹಿಂದಿನ ಮಾದರಿಯು ಎರಡು ರೂಪಾಂತರಗಳಲ್ಲಿ ಬಂದಿದೆ. ಇದರ ಬೆಲೆ ರೂ 80,048 ರಿಂದ ಪ್ರಾರಂಭವಾಗಿತ್ತು. ಕಂಪನಿಯು ಹೊಸ ಡೆಸ್ಟಿನಿಯನ್ನು ಯಾವ ಬೆಲೆಗೆ ಮಾರಾಟ ಮಾಡಲಿದೆ ಎಂಬುದು ತಿಳಿದುಬರಬೇಕಿದೆ.
ಇದನ್ನೂ ಓದಿ: ಈಗ ಪೋಷಕರ ಕೈಯಲ್ಲಿ ಮಕ್ಕಳ ಯೂಟ್ಯೂಬ್ ಕಂಟ್ರೋಲ್: ಹೊಸ ವೈಶಿಷ್ಟ್ಯದ ಪರಿಚಯ - YouTube Feature For Teenage Safety