ಬೆಂಗಳೂರು: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮೋದಿಸುವ ಅಧಿಕಾರ ಮಾತ್ರ ಹೊಂದಿದ್ದಾರೆ, ತನಿಖೆ ನಡೆಸುವ ಅಧಿಕಾರ ಹೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಕಾನೂನುಬಾಹಿರ ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಿಂದ ನಿವೇಶನಗಳನ್ನು ಅಕ್ರಮವಾಗಿ ತಮ್ಮ ಪತ್ನಿ ಹೆಸರಿನಲ್ಲಿ ಪಡೆಯಲಾಗಿದೆ ಎಂಬ ಆರೋಪ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿಯ ಪ್ರಾಥಮಿಕ ತನಿಖಾ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರ(ರಾಜ್ಯಪಾಲರು) ನಿರ್ಧರಿಸಬೇಕಿತ್ತು. ಆದರೆ, ಅವರು ತನಿಖಾಧಿಕಾರಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17ಎ ಅಡಿ ಅನುಮತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ವಿವರಿಸಿದರು.
ಇದಕ್ಕೆ ಪೀಠ, ಸೆಕ್ಷನ್ 17ಎ ಅಡಿ ಅನುಮತಿಗೂ ಮುನ್ನ ತನಿಖೆ ನಡೆಯಬೇಕು ಎಂದು ನೀವು ಸಲಹೆ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿತು. ಈ ವೇಳೆ ಅಡ್ವೋಕೇಟ್ ಜನರಲ್, ಸೆಕ್ಷನ್ 17ಎ ಅನುಮತಿಗೂ ಮುನ್ನ ತನಿಖೆ ಅಗತ್ಯ. ದೂರುದಾರರ ಪ್ರಕಾರ 1998ರಲ್ಲಿ ಆಕ್ಷೇಪಾರ್ಹವಾದ 3.16 ಎಕರೆ ಭೂಮಿ ಡಿನೋಟಿಫಿಕೇಶನ್ ಆಗಿದೆ. ಪ್ರಕರಣ ದಾಖಲಿಸುವಾಗ ಅಪಾರ ವಿಳಂಬವಾಗಿದೆ ಎಂದು ತಿಳಿಸಿದರು.
ಖಾಸಗಿ ವ್ಯಕ್ತಿ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆಯ ಸೆಕ್ಷನ್ 17ಎ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ಕಾಯಿದೆಯನ್ವಯ ಪ್ರಾಥಮಿಕ ತನಿಖೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ. ಯಾವುದೇ ತನಿಖೆ ನಡೆದಿಲ್ಲ. ಪ್ರಕರಣದಲ್ಲಿ ಸಾಕಷ್ಟು ವಿಳಂಬವಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. ಬಳಿಕ ನೇರವಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಖಾಸಗಿ ವ್ಯಕ್ತಿ ಅನುಮತಿ ಕೇಳಿದ್ದಾರೆ. ಅಂದರೆ ಅವರು ಪೊಲೀಸ್ ಅಧಿಕಾರಿಗಿಂತ ಉನ್ನತ ಸ್ಥಾನದಲ್ಲಿ ಊಹಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಪ್ರಕರಣ ಸಂಬಂಧ ಮೊದಲು ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಆರೋಪ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆಯುವ ಕುರಿತ ಅಭಿಪ್ರಾಯವನ್ನು ಪೊಲೀಸ್ ಅಧಿಕಾರಿ ಮಾತ್ರ ಮಾಡಬೇಕಾಗುತ್ತದೆ. ಪ್ರಕರಣ ಸಂಬಂಧ ತನಿಖಾಧಿಕಾರಿಯಿಂದ ಮಾಹಿತಿ ನೀಡುವಂತೆ ಕೇಳುವುದಕ್ಕೆ ಅವಕಾಶವಿತ್ತು. ಅಲ್ಲದೆ, ಸಕ್ಷಮ ಪ್ರಾಧಿಕಾರವಾಗಿರುವ (ರಾಜ್ಯಪಾಲರು) ಪ್ರಾಥಮಿಕ ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ವಿವರಿಸಿದರು.
ಅಲ್ಲದೆ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 17ಎ ಅಡಿ ಮತ್ತು ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಗಳ(ಎಸ್‌ಒಪಿ) ಪ್ರಕಾರ ತನಿಖಾಧಿಕಾರಿಗಳಿಂದ ರಾಜ್ಯಪಾಲರ ಮಾಹಿತಿ ಸಂಗ್ರಹಿಸಬೇಕಾಗಿತ್ತು. ರಾಜ್ಯಪಾಲರ ಅರ್ಜಿಯನ್ನು ಪರಿಗಣಿಸಬಾರದಿತ್ತು. ಅರ್ಜಿಯನ್ನು ದೂರುದಾರರಿಗೆ ಹಿಂದಿರುಗಿಸಬೇಕಾಗಿತ್ತು ಎಂದು ಪೀಠಕ್ಕೆ ಶೆಟ್ಟಿ ತಿಳಿಸಿದರು.
ಪ್ರಕರಣ ಸಂಬಂಧ ರಾಜ್ಯಪಾಲರು, ವಿವೇಚನೆ ಬಳಸಿಲ್ಲ. ಪ್ರಾಥಮಿಕ ತನಿಖೆ ನಡೆಸಲಾಗಿಲ್ಲ. ದೂರುದಾರರು ಜುಲೈ 18 ಮತ್ತು 28ರಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಆನಂತರ ಪೂರ್ವಾನುಮತಿ ಕೋರಿದ್ದಾರೆ. ಪೊಲೀಸರಿಗೆ ತನಿಖೆ ನಡೆಸಲು ಅವಕಾಶವನ್ನೇ ನೀಡಿಲ್ಲ. ಇಲ್ಲಿ ಸಕ್ಷಮ ಪ್ರಾಧಿಕಾರವೇ ಪ್ರಾಥಮಿಕ ತನಿಖೆ ನಡೆಸಿದೆ. ಇದು ನಿಯಮ ಬಾಹಿರ ಎಂದರು.
ದೂರುದಾರರಲ್ಲಿ ಒಬ್ಬರಾದ ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ವಾದಿಸಿದ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್, ಸಿದ್ದರಾಮಯ್ಯ ಅವರು 1996-99ರ ನಡುವೆ ಉಪಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಆಕ್ಷೇಪಾರ್ಹವಾದ 3.16 ಎಕರೆ ಭೂಮಿಯ ಡಿನೋಟಿಫಿಕೇಶನ್ ಆಗಿದೆ. 2004-07ರ ನಡುವೆ ಈ ಪ್ರಕ್ರಿಯೆ ನಡೆದಿದೆ. 2008-13ರ ನಡುವೆ ಭೂಮಿ ವರ್ಗಾವಣೆಯಾಗಿದೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯರ ಪತ್ನಿ ಪರಿಹಾರ ಕೋರಿದ್ದಾರೆ. 2018-22ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಶಾಸಕರಾಗಿದ್ದು, ಅಧಿಕಾರದ ಹುದ್ದೆಯಲ್ಲಿದ್ದರು. ಪ್ರತಿಯೊಂದು ನಡೆ, ಪ್ರತಿಯೊಂದು ಕೆಲಸವೂ ಅರ್ಜಿದಾರರ ಪರವಾಗಿ ನಡೆದಿದೆ. 2023ರಲ್ಲಿ ಎಲ್ಲವೂ ಆದ ಮೇಲೆ 14 ನಿವೇಶನ ವಾಪಸ್ ಪಡೆಯಿರಿ, 50 ಕೋಟಿ ಪರಿಹಾರ ಕೊಡಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತು.
ಇದನ್ನೂ ಓದಿ: ಬಿಬಿಎಂಪಿಗೆ ಕನ್ನಡಿಗರೇ ಮೇಯರ್ ಆಗಿರ್ಬೇಕು, ಗ್ರೇಟರ್ ಬೆಂಗಳೂರು ಬಿಲ್ ಲೋಪ ಸರಿಪಡಿಸದಿದ್ದರೆ ಹೋರಾಟ: ಅಶೋಕ್ - R Ashok