ಬೆಂಗಳೂರು: ರಾಜಧಾನಿಯಲ್ಲಿ ಜನರಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಲು 233 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದ ವಿಜ್ಞಾನ ನಗರಿ ಸ್ಥಾಪನೆಯ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆ ವಿದ್ಯಾರ್ಥಿಗಳು ಮತ್ತು ಉದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಹಾಕಿಕೊಂಡಿದೆ. ಸ್ಟಾರ್ಟಪ್‌ಗಳನ್ನು ಪ್ರೇರೇಪಿಸಲು ರಾಜೀವ್ ಗಾಂಧಿ ವಾಣಿಜ್ಯೋದ್ಯಮ ಕಾರ್ಯಕ್ರಮ ಮತ್ತು ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಮಹಿಳಾ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆ ಬೆಂಬಲ ಕಾರ್ಯಕ್ರಮ ಪ್ರಮುಖವಾಗಿದೆ.
ಭಾರತದಲ್ಲೇ ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದ್ದು, ಅದನ್ನು ಉಳಿಸಿಕೊಳ್ಳಲು ಹಲವು ಕ್ರಮಗಳನ್ನು ಸಹ ಘೋಷಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅಗ್ರಿ ಇನ್ನೋವೇಶನ್ ಸ್ಟಾರ್ಟ್ ಅಪ್ ಸ್ಥಾಪಿಸಲು ಸಿ-ಕ್ಯಾಂಪ್ ಅಗ್ರಿ ಇನ್ನೋವೇಶನ್ ಪಾರ್ಕ್‌ಗೆ 5 ಎಕರೆ ಭೂಮಿ ಮೀಸಲಿಡಲಾಗಲಿದೆ. ಉದಯೋನ್ಮುಖ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಫಿನ್ಟೆಕ್, ಸ್ಪೇಸ್ಟೆಕ್ ಮತ್ತು ಆಟೋಮೋಟಿವ್ ಟೆಕ್‌ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಯಾಗಲಿದೆ. ಈ ಎಕ್ಸಲೆನ್ಸ್ ಸೆಂಟರ್ 5 ವರ್ಷಗಳ ಅವಧಿಯಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಉದ್ಯಮಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯರೋಪಕ್ಕೆ ಬರಲಿದೆ.
ಬೆಂಗಳೂರು ನಗರದಲ್ಲಿ 400ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳಿದ್ದು, ಇನ್ನಷ್ಟು ಕೇಂದ್ರಗಳನ್ನು ಸ್ಥಾಪಿಸಿ ಹೂಡಿಕೆ ಆಕರ್ಷಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಹಾಗು ಕಿಯೋನಿಕ್ಸ್ ಸಹಯೋಗದೊಂದಿಗೆ 2 ಕೋಟಿ ರೂ ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನ, ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆಯನ್ನು ಕೂಡ ಬಜೆಟ್‌ನಲ್ಲಿ ಘೋಷಿಸಲಾಗಿದೆ.