ಬೆಂಗಳೂರು: ''ಸಭೆ ಸೇರುವುದರಲ್ಲಿ ತಪ್ಪಿಲ್ಲ, ನಾವು ಸೇರಲೇಬಾರದಾ'' ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ದಲಿತ ನಾಯಕರ ಡಿನ್ನರ್ ಸಭೆ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ''ಡಿನ್ನರ್ ಪಾರ್ಟಿ ಅಲ್ಲ ಅದು. ನಾವು ಸೇರಲೇಬಾರದಾ?. ರಾಜಕಾರಣಿಗಳು, ಸ್ನೇಹಿತರು ಯಾವಾಗಲೂ ಒಟ್ಟಿಗೆ ಸೇರುತ್ತೇವೆ. ಹೈಕಮಾಂಡ್ ನಾಯಕರು ಸಭೆ ಸೇರಬೇಡಿ ಅಂತ ಹೇಳಲ್ಲ. ಸಭೆ ಸೇರುವುದರಲ್ಲಿ ತಪ್ಪಿಲ್ಲ'' ಎಂದರು.
ವಿಧಾನಸೌಧದಲ್ಲೇ ಸಭೆ ನಡೆಸಬಹುದು ಎಂಬ ಬಿಜೆಪಿಯ ನಾಯಕರ ವ್ಯಂಗ್ಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಕ್ಯಾಬಿನೆಟ್ನಲ್ಲಿ ಎಲ್ಲರಿಗೂ ಅವಕಾಶ ಇದೆಯಾ?. ಬಿಜೆಪಿಗೆ ಸಾಮಾನ್ಯ ಪ್ರಜ್ಞೆ ಇದೆಯಾ?. ಬಿಜೆಪಿಯವರು ಮೊದಲು ನಿಮ್ದು ನೋಡಿಕೊಳ್ಳಿ. ಕಾಂಗ್ರೆಸ್ ಬಗ್ಗೆ ಮಾತನಾಡುವುದು ನಿಲ್ಲಿಸಿ'' ಎಂದು ವಾಗ್ದಾಳಿ ನಡೆಸಿದರು.
''ಸಂಕ್ರಾಂತಿ ಆದ ಮೇಲೆ ವಿಜಯೇಂದ್ರ ಬದಲಾವಣೆ ಆಗುತ್ತಾರೆ ಅಂತ ಅವರೇ ಅಧಿಕೃತವಾಗಿ ಹೇಳುತ್ತಿದ್ದಾರೆ. ನಮ್ಮದು ಪಕ್ಷವನ್ನು ಸಕ್ರಿಯಗೊಳಿಸುವ ಬಗ್ಗೆ ಅಷ್ಟೇ ಚರ್ಚೆ. ಬಿಜೆಪಿಯಲ್ಲಿ ಯಾವ ರೀತಿ ಪಕ್ಷ ನಾಶ ಮಾಡಬೇಕು?. ಯಾರ ನಾಯಕತ್ವದಲ್ಲಿ ನಾಶ ಮಾಡಬೇಕು ಎಂಬ ಚರ್ಚೆ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ'' ಎಂದು ಟೀಕಿಸಿದರು.
ಇದನ್ನೂ ಓದಿ: ಮುಡಾ ಹಗರಣ ಮಹತ್ತರ ತಿರುವು ಪಡೆದುಕೊಂಡಿದೆ: ಬಿ ವೈ ವಿಜಯೇಂದ್ರ
ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್ ವಿಚಾರವಾಗಿ ಮಾತನಾಡಿ, ''ಸಿಎಂ, ಡಿಸಿಎಂ ಹೇಳಿದ್ರು, ಅದನ್ನು ಎಐಸಿಸಿ ಅಧ್ಯಕ್ಷರು ಪುನರುಚ್ಚಾರ ಮಾಡಿದ್ದಾರೆ ಅಷ್ಟೇ. ಯಾರ ಬಾಯಿಗೂ ಕೂಡ ಬೀಗ ಹಾಕಲು ಆಗಲ್ಲ. ನಮ್ಮ ನಮ್ಮ ವಿವೇಚನೆ ಬಳಸಿ ಮಾತಾಡಬೇಕು. ಮಾತಿನಿಂದ ಪಕ್ಷಕ್ಕೆ ಹಾನಿ ಆಗುತ್ತೆ ಎಂಬುದನ್ನು ನಾವು ಯೋಚನೆ ಮಾಡಬೇಕು'' ಎಂದರು.
''ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಧಿಕಾರ ಸಿಕ್ಕ ಮೇಲೆ ಯಾವ ಕಾಂಗ್ರೆಸ್ ಪಾರ್ಟಿ, ಎಐಸಿಸಿ ಅಧ್ಯಕ್ಷರ ಯಾರು?. ರಾಹುಲ್ ಗಾಂಧಿ ಯಾರು? ಹೈಕಮಾಂಡ್ ಏನ್ ಮಾಡುತ್ತೆ ಎನ್ನುವುದು ಸರಿಯಲ್ಲ. ಸಿಎಂ, ಡಿಸಿಎಂ, ಮಲ್ಲಿಕಾರ್ಜುನ ಖರ್ಗೆ ಸಾಹೆಬ್ರು ಸಂದೇಶ ಕೊಟ್ಟಿದ್ಧಾರೆ. ಆ ಸೂಚನೆ ಮೇರೆಗೆ ನಾವು ಕೆಲಸ ಮಾಡಬೇಕು'' ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ: ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್