ಬೆಳಗಾವಿ: ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ರೆ ದೊಡ್ಡವರು ಆಗುತ್ತೇವೆ ಎನ್ನುವ ಭ್ರಮೆ ಇದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಯೋಚಿಸಬೇಕು. ಈಗಾಗಲೇ ಹಣಕಾಸಿನ ನೆರವಿನ ಬಗ್ಗೆ ನಿರ್ಮಲಾ ಸೀತಾರಾಮನ್ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಮಾತಿಗೆ ನಗಬೇಕೋ, ಅಳಬೇಕೋ ಗೊತ್ತಾಗ್ತಿಲ್ಲ. ಮೋದಿ ಬಗ್ಗೆ ಹಗುರವಾಗಿ ಮಾತಾಡಿದರೆ ದೊಡ್ಡವರಾಗುತ್ತೇವೆ ಎನ್ನುವ ಭಾವನೆ ಇದ್ದರೆ ಅದು ಖಂಡಿತ ಸಾಧ್ಯವಿಲ್ಲ. ಇಂತಹ ಮಾತು ಕಡಿಮೆ ಮಾಡಿ, ನಿಮ್ಮ ಸಿಎಂ ಸ್ಥಾನಕ್ಕೆ ಗೌರವ ತರಲ್ಲ ಎಂದು ಕಿಡಿಕಾರಿದರು.
ಮೋದಿ ಹೆಸರು ಹೇಳಿ ಮತ ಕೇಳಿದ್ರೆ ಕಪಾಳಮೋಕ್ಷ ಮಾಡಿ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ವಿಚಾರಕ್ಕೆ, ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಇದು ಶೋಭೆ ತರಲ್ಲ. ಅತಿರೇಕದ ಪರಾಮಾವಧಿ. ಹಗುರವಾದ ಮಾತುಗಳನ್ನು ಆಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.