ಕರ್ನಾಟಕ

karnataka

ETV Bharat / state

ರೇಷನ್​ ಕಾರ್ಡ್​ ರದ್ದತಿ; ಯಾರಿಗೆ ಗೃಹಲಕ್ಷ್ಮೀ ಹಣ ಬರುತ್ತೆ, ಯಾರಿಗೆ ಬರಲ್ಲ? ಗೊಂದಲಕ್ಕೆ ಸಚಿವರ ಸ್ಪಷ್ಟನೆ - RATION CARD CANCEL

ರೇಷನ್​ ಕಾರ್ಡ್​ ರದ್ದತಿಯಿಂದ ಯಾರಿಗೆ ಗೃಹಲಕ್ಷ್ಮೀ ಹಣ ಬರುತ್ತೆ, ಯಾರಿಗೆ ಬರಲ್ಲ ಎಂಬ ಗೊಂದಲ ಸೃಷ್ಟಿಯಾಗಿದ್ದು ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಳಗಾವಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

RATION CARD CANCELLATION
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (ETV Bharat)

By ETV Bharat Karnataka Team

Published : Nov 21, 2024, 12:46 PM IST

ಬೆಳಗಾವಿ: ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್​ ಹೊಂದಿದವರಿಗೆ, ಯಾರು ತೆರಿಗೆ ಕಟ್ಟೊದಿಲ್ಲವೋ ಅಂತವರಿಗೆ ಗೃಹಲಕ್ಷ್ಮೀ ಹಣ ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ನಗರದಲ್ಲಿ ಬುಧವಾರ ಮಾಧ್ಯಮದವರೆದುರು ಅವರು ಸ್ಪಷ್ಟಪಡಿಸಿದರು.

ಎಪಿಎಲ್‌ ಕಾರ್ಡ್‌ ಇದ್ದವರಿಗೂ ಗೃಹಲಕ್ಷ್ಮೀ ಹಣ ಬರುತ್ತದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ. 80 ಸಾವಿರ ಬಿಪಿಎಲ್ ಕಾರ್ಡ್​ಗಳನ್ನ ರದ್ದತಿ ಮಾಡುವ ಬದಲು ಎಪಿಎಲ್‌ಗೆ ವರ್ಗಾಯಿಸಲಾಗಿದೆ. ಇದರಿಂದ ಯಾವುದೇ ಗೊಂದಲ ಇಲ್ಲ. ಎಪಿಎಲ್-ಬಿಪಿಎಲ್ ಇದ್ದವರಿಗೆ ಗೃಹಲಕ್ಷ್ಮೀ ಹಣ ಬರುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಭಯ ನೀಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (ETV Bharat)

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯ ಸಾವು ವಿಚಾರ ಮಾಧ್ಯಮಗಳಲ್ಲಿ ನೋಡಿದ್ದೇನೆ. ತಪ್ಪಿತಸ್ಥ ವೈದ್ಯರ ಮೇಲೆ ಆದಷ್ಟು ಬೇಗ ಕಠಿಣ ಕ್ರಮವಾಗಬೇಕು. ನಾವು ಬರೀ ಹೇಳುವುದು ಆಗಬಾರದು, ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಬಿಮ್ಸ್ ಆಸ್ಪತ್ರೆಯ ಎಲ್ಲ ವ್ಯವಸ್ಥೆಯಲ್ಲೂ ಸರ್ಜರಿ ಆಗಬೇಕೆಂದು ನಾನು ಮೊದಲಿನಿಂದಲೂ ಹೇಳುತ್ತಿರುವೆ. ಶಿಸ್ತು, ಆರೋಗ್ಯ ದೃಷ್ಟಿಯಿಂದ ವೈದ್ಯರು, ನರ್ಸ್​ಗಳು ಎಲ್ಲವನ್ನು ಸರಿಪಡಿಸುವ ಕೆಲಸವಾಗಬೇಕು. ನಾನು ಭೇಟಿ ನೀಡಿ ಪರಿಶೀಲನೆ ಮಾಡಿರುವೆ. ಆದರೂ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಶಾಸಕ ರವಿ ಗಣಿಗ ಆರೋಪದ ಬಗ್ಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್​, ಇಡೀ ದೇಶದಲ್ಲಿ ಈ ರೀತಿಯ ವ್ಯವಹಾರ ನಡೆಯುತ್ತಿದೆ. ಬಿಜೆಪಿಯವರು ನಿರಂತರವಾಗಿ ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ನಾವು ಗಟ್ಟಿಯಾಗಿದ್ದೇವೆ, ಸುಭದ್ರವಾಗಿರುವ ಸರ್ಕಾರವನ್ನು ಏನು ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ತಿರುಗೇಟು ಕೊಟ್ಟರು.

ಸಚಿವ ಸಂಪುಟದ ಖಾತೆ ಬದಲಾವಣೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಅದು ನನ್ನ ಗಮನಕ್ಕೆ ಬಂದಿಲ್ಲ. ಖಾತೆ ಬದಲಾವಣೆ ಚರ್ಚೆ ಆಗಿಲ್ಲ ಎಂದರು. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಡಿ. 9ರಿಂದ 10 ದಿನಗಳ ಕಾಲ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು, ಪರಿಹಾರ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸರ್ಕಾರಿ ನೌಕರರು, IT ಪಾವತಿದಾರರ BPL ಕಾರ್ಡ್ ಮಾತ್ರ ರದ್ದು, ಅರ್ಹರ ಕಾರ್ಡ್​ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಿ: ಸಿಎಂ

ಬೆಂಗಳೂರಿನಲ್ಲಿ ಇದೇ ವಿಚಾರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ರಾಜ್ಯದಲ್ಲಿ ಸುಮಾರು ಶೇ.15ರಷ್ಟು ಅನರ್ಹ ಬಿಪಿಎಲ್‌ ಕಾರ್ಡ್​ಗಳು ರದ್ದಾಗುವ ಸಾಧ್ಯತೆ ಇದೆ. ಕೆಲವು ಕಡೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿರುವ ಆರೋಪಗಳು ಬರುತ್ತಿವೆ. ನಮ್ಮ ಕ್ಷೇತ್ರದಲ್ಲಿ 400 ಕಾರ್ಡ್‌ ರದ್ದಾಗಿವೆ. ಪಡಿತರ ಚೀಟಿಗಳ ಪರಿಶೀಲನೆ ವೇಳೆ ಅರ್ಹರು ಇದ್ದರೆ, ಅಂಥವರ ಕಾರ್ಡ್‌ಗಳನ್ನು ವಾಪಸ್‌‍ ಕೊಡುತ್ತೇವೆ. ಕೆಲವರು ಕಾರ್ಡ್‌ ಬೇಡ ಎನ್ನುತ್ತಿದ್ದರು. ಒಂದು ವೇಳೆ ತಪ್ಪು ಮಾಹಿತಿಯಿಂದ ರದ್ದಾದರೆ ಅಂತಹವರಿಗೆ ಮತ್ತೆ ಕಾರ್ಡ್‌ ನೀಡಲಾಗುವುದು. ಅರ್ಹರು ಬಿಪಿಎಲ್‌ ಕಾರ್ಡ್‌ನಿಂದ ವಂಚಿತರಾಗಬಾರದು. ಅನರ್ಹರು ಈ ಕಾರ್ಡ್‌ಗಳನ್ನು ಪಡೆಯಬಾರದು ಎಂಬುದು ಸರ್ಕಾರದ ಉದ್ದೇಶ. ನಾವು ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟಿದ್ದೇವೆ ಎಂದು ಹೇಳಿದರು.

ಸಿಎಂ ನಿರ್ಧಾರ : ಶಾಸಕರು ಸಂಪುಟ ಪುನರ್‌ ರಚನೆಗೆ ಒತ್ತಾಯಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಚಿವರಾಗಲು ಎಲ್ಲರಿಗೂ ಕೆಪಾಸಿಟಿ ಇದೆ. ಕಾಂಗ್ರೆಸ್‌‍ನಲ್ಲಿ 136 ಶಾಸಕರು ಇದ್ದಾರೆ. ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ತೀರ್ಮಾನ ಮಾಡುತ್ತಾರೆ. ಈ ರೀತಿ ಅಭಿಪ್ರಾಯ ಶಾಸಕ ನರೇಂದ್ರಸ್ವಾಮಿ ಒಬ್ಬರದ್ದಲ್ಲ, ಬಹಳ ಜನರ ಅಭಿಪ್ರಾಯ ಇದೆ ಎಂದರು.

ABOUT THE AUTHOR

...view details