ಬೆಂಗಳೂರು:ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಹಾಗೂ ಆಹಾರ ಮೇಳ ನಡೆಸಲು ಸ್ಪೀಕರ್ ಯು.ಟಿ.ಖಾದರ್ ತೀರ್ಮಾನಿಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ ಪುಸ್ತಕ ಮೇಳ ಹಾಗೂ ಸಾಹಿತ್ಯ ಮೇಳ ಮಾಡಲು ತೀರ್ಮಾನಿಸಲಾಗಿದೆ. ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ನಡೆಸಲಾಗುತ್ತದೆ. ಫೆ.28ರಿಂದ ಮಾರ್ಚ್ 3ರವರೆಗೆ ಪುಸ್ತಕ ಮೇಳ ಹಾಗೂ ಸಾಹಿತ್ಯ ಮೇಳ ಕೈಗೊಳ್ಳಲಾಗುವುದು. ಸಿಎಂ ಸಿದ್ದರಾಮಯ್ಯ ಪುಸ್ತಕ ಮೇಳ ಉದ್ಘಾಟನೆ ಮಾಡಲಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.
ಸಾಹಿತಿಗಳು, ಪುಸ್ತಕಪ್ರಿಯರು, ವಿದ್ಯಾರ್ಥಿಗಳನ್ನು ವಿಧಾನಸೌಧದ ಹತ್ತಿರಗೊಳಿಸಲು ಇದು ಸಹಕಾರಿಯಾಗಲಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರ, ಪುಸ್ತಕ ಬಿಡುಗಡೆ ಹಾಗೂ ಉತ್ತಮ ಪುಸ್ತಕಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾಡಲಾಗುವುದು. ಶಾಸಕರು ತಮ್ಮ ನಿಧಿಯಿಂದ ಮೂರು ಲಕ್ಷ ರೂ. ಬಳಸಿ ಪುಸ್ತಕ ಖರೀದಿಸಿ ಅವರ ಕ್ಷೇತ್ರದ ಲೈಬ್ರರಿಗೆ ಕೊಡಬಹುದಾಗಿದೆ. ಕಡಿಮೆ ದರದಲ್ಲಿ ಪುಸ್ತಕ ಸಿಗುವಂತೆ ಮಾಡಲಾಗುವುದು ಎಂದರು.
ಪುಸ್ತಕ ಮೇಳದ ಜೊತೆ ಆಹಾರ ಮೇಳ:ಪುಸ್ತಕ ಮೇಳದ ಜೊತೆಗೆ ಆಹಾರ ಮೇಳವನ್ನೂ ವಿಧಾನಸೌಧದಲ್ಲಿ ಆಯೋಜಿಸಲಾಗುವುದು. ಸಂಜೆ ಸಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪುಸ್ತಕ ಮೇಳಕ್ಕೆ ಬಂದವರಿಗೆ ಆಹಾರ ಮೇಳವನ್ನೂ ಆಯೋಜಿಸಲಾಗಿದೆ ಎಂದು ಇದೇ ವೇಳೆ ಯು.ಟಿ. ಖಾದರ್ ತಿಳಿಸಿದರು.