ಶಿವಮೊಗ್ಗ :ಶಿರಾಳಕೊಪ್ಪ ಬಸ್ ನಿಲ್ದಾಣದ ಮುಂಭಾಗ ಇಂದು ಮಧ್ಯಾಹ್ನ ಸ್ಫೋಟವಾಗಿದೆ. ಪರಿಣಾಮ ಬೆಡ್ ಶೀಟ್ ವ್ಯಾಪಾರಿ ಅಂತೋನಿದಾಸ್ (50) ಎಂಬುವರು ಗಾಯಗೊಂಡಿದ್ದಾರೆ.
ಅಂತೋನಿ ದಾಸ್ ಅವರ ಗಾಡಿ ಬಳಿ ಹಾವೇರಿ ಜಿಲ್ಲೆಯ ದಂಪತಿ ಉಮೇಶ್ ಹಾಗೂ ರೂಪಾ ದಂಪತಿ ಆಗಮಿಸಿ, ತಮ್ಮ ಬಳಿ ಇರುವ ಬ್ಯಾಗ್ ಅನ್ನು ಇಟ್ಟು ಬೇರೆ ಅಂಗಡಿಗೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ದಂಪತಿ ಇಟ್ಟಿದ್ದ ಬ್ಯಾಗ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಂತೋನಿ ದಾಸ್ ಕಾಲು ಹಾಗೂ ಕೈಗೆ ಗಾಯವಾಗಿದೆ. ತಕ್ಷಣ ಇವರನ್ನು ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ.
ಉಮೇಶ್ ದಂಪತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇವರು ಕಾಡು ಪ್ರಾಣಿಗಳಿಗೆ ಇಡುವ ಸಿಡಿಮದ್ದನ್ನು ತಮ್ಮ ಬ್ಯಾಗ್ನಲ್ಲಿ ಇಟ್ಟಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇಂದು ಸಂತೆ ಇರುವ ಕಾರಣ ದಂಪತಿ ಶಿರಾಳಕೊಪ್ಪಕ್ಕೆ ಆಗಮಿಸಿದ್ದರು. ಸ್ಫೋಟದಿಂದ ಅಂತೋನಿದಾಸ್ ಅವರ ಬಳಿ ಇದ್ದ ಎಲೆಕ್ಟ್ರಿಕಲ್ ಗ್ಯಾಸ್ ಸ್ಟೌವ್ ಸಹ ಸ್ಫೋಟವಾಗಿದೆ. ಶಿರಾಳಕೊಪ್ಪಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಗಾಯಾಳು ಅಂತೋನಿ ದಾಸ್ ಮಾತನಾಡಿ, ''ನಾನು ಬೆಡ್ ಶೀಟ್ ವ್ಯಾಪಾರ ಮಾಡುತ್ತೇನೆ. ಪ್ರತಿ ಸಂತೆಯ ವೇಳೆ ನಾನು ಶಿರಾಳಕೊಪ್ಪದಲ್ಲಿ ಅಂಗಡಿ ಹಾಕುತ್ತೇನೆ. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ನಮ್ಮಲ್ಲಿ ಬೆಡ್ ಶೀಟ್ ಖರೀದಿ ಮಾಡಿ ನಮ್ಮ ಬಳಿ ಕೈ ಚೀಲದಂತಹ ಬ್ಯಾಗ್ ಅನ್ನು ಇಟ್ಟು ಬೇಗ ಬರುವುದಾಗಿ ಹೇಳಿ ಹೋದರು. ಅದರಲ್ಲಿ ಏನಿತ್ತು ಏನೂ ಗೊತ್ತಿಲ್ಲ. ಅಲ್ಲಿ ಬ್ಯಾಗ್ಗೆ ನನ್ನ ಕಾಲು ತಾಗಿ ಬ್ಲಾಸ್ಟ್ ಆಯಿತು. ಇದರಿಂದ ನನ್ನ ಎರಡು ಕಾಲುಗಳಿಗೆ, ಕೈಗಳಿಗೆ ಗಾಯವಾಗಿದೆ. ಉಳಿದಂತೆ ಸಿಡಿಮದ್ದಿನ ಚೂರು ಸಿಡಿದು ಸಣ್ಣಪುಟ್ಟ ಗಾಯವಾಗಿದೆ. ಅದು ಕಲ್ಲಿನ ಪುಡಿ ಸಿಡಿದ ಹಾಗೆ ಸಿಡಿದಿದೆ ಎಂದರು. ಬಂದವರು ನನಗೆ ಪರಿಚಯವಿಲ್ಲ. ಅವರು ನಾವು ತಡಗುಂದದವರು ಎಂದು ಹೇಳಿ ಪರಿಚಯ ಮಾಡಿಕೊಂಡು ನಂತರ ಬ್ಯಾಗ್ ಇಟ್ಟು ಹೋದರು. ಈ ಕುರಿತು ತನಿಖೆ ನಡೆಸಬೇಕು'' ಎಂದು ಒತ್ತಾಯಿಸಿದ್ದಾರೆ.