ಕರ್ನಾಟಕ

karnataka

ETV Bharat / state

ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ಕಾಲರ್​ ಪಟ್ಟಿ ಹಿಡಿದ ಆರೋಪ: ಉಳ್ಳಾಲದಲ್ಲಿ ಭಾರೀ ಗಲಾಟೆ - ULLAL BJP PROTEST - ULLAL BJP PROTEST

ಸರ್ಕಾರದ ತೈಲ ಬೆಲೆ ಏರಿಕೆ ನೀತಿಯ ವಿರುದ್ಧ ರಸ್ತೆ ತಡೆ ನಡೆಸುತ್ತಿದ್ದ ವೇಳೆ ಠಾಣಾಧಿಕಾರಿಯೊಬ್ಬರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕಾಲರ್​​ ಪಟ್ಟಿ ಹಿಡಿದು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸ್ಥಳದಲ್ಲಿ ಗೊಂದಲ ಉಂಟಾಗಿತ್ತು.

ಉಳ್ಳಾಲದಲ್ಲಿ ಮಾತಿನ ಚಕಮಕಿ
ಉಳ್ಳಾಲದಲ್ಲಿ ಮಾತಿನ ಚಕಮಕಿ (ETV Bharat)

By ETV Bharat Karnataka Team

Published : Jun 20, 2024, 4:24 PM IST

ಉಳ್ಳಾಲ(ದಕ್ಷಿಣ ಕನ್ನಡ): ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಮಂಗಳೂರು ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಕೊನೆ ಗಳಿಗೆಯಲ್ಲಿ ಪೊಲೀಸ್ ಹಾಗೂ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಯಿಂದ ಕೊನೆಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ತಡೆಗೆ ಮುಂದಾದ ಬಿಜೆಪಿ ಮಂಗಳೂರು ಮಂಡಲದ ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ ಅವರನ್ನು ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ಹಿಡಿದು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಪರಿಣಾಮ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಸಿದ ಘಟನೆ ಕಂಡುಬಂತು.

ಘಟನೆಗೆ ಕಾರಣ: ರಾಜ್ಯ ಸರ್ಕಾರದ ಪೆಟ್ರೋಲ್​, ಡೀಸೆಲ್​ ತೈಲ ಬೆಲೆ ಏರಿಕೆ ನೀತಿಯ ವಿರುದ್ಧ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ಫ್ಲೈಓವರ್​ನಲ್ಲಿ ಗುರುವಾರ ರಸ್ತೆ ತಡೆ ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ಮುಖಂಡರುಗಳಾದ ಮಾಜಿ ಶಾಸಕ ಜಯರಾಮ ಶೆಟ್ಟಿ, ಸಂತೋಷ್ ರೈ ಬೋಳಿಯಾರ್, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಅಮ್ಟೂರು, ಮಹೇಶ್ ಜೋಗಿ, ಮಂಡಲ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಧನಲಕ್ಷ್ಮೀ ಗಟ್ಟಿ ಸೇರಿದಂತೆ ಮಂಗಳೂರು ಮಂಡಲದ ಮುಖಂಡರು ರಾಜ್ಯ ಸರ್ಕಾರದ ಬೆಲೆಯೇರಿಕೆ ನೀತಿಯ ವಿರುದ್ಧ ಖಂಡನಾ ಭಾಷಣ ಮಾಡಿದರು.

ಉಳ್ಳಾಲದಲ್ಲಿ ಮಾತಿನ ಚಕಮಕಿ (ETV Bharat)

ಬಳಿಕ ಸೇರಿದ್ದ ಬಿಜೆಪಿ ಕಾರ್ಯಕರ್ತರು ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದಾಗ ಸ್ಥಳದಲ್ಲಿ ಬಂದೋಬಸ್ತ್​ನಲ್ಲಿದ್ದ ಇನ್ಸ್​ಪೆಕ್ಟರ್ ಬಾಲಕೃಷ್ಣ ಅವರು ತಡೆಹಿಡಿದರು. ಮೇಲಾಧಿಕಾರಿಗಳ ಆದೇಶ ಇದ್ದು, ಹೆದ್ದಾರಿ ತಡೆದಲ್ಲಿ ಕಾನೂನು ಕ್ರಮಕೈಗೊಳ್ಳಲು ಆದೇಶವಿರುವುದಾಗಿ ಹೇಳಿದರು. ಈ ನಡುವೆ ಮಂಡಲದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮುರಳಿ ಕೊಣಾಜೆ ರಾ.ಹೆ ತಡೆಯಲು ರಸ್ತೆಗೆ ಬಂದ ಸಂದರ್ಭದಲ್ಲೇ ಶರ್ಟ್​ನ ಕೊರಳ​ ಪಟ್ಟಿಯನ್ನು ಹಿಡಿದ ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ಹೆದ್ದಾರಿಯಿಂದ ಬದಿಗೆ ಕರೆತಂದರು ಎಂದು ವರದಿಯಾಗಿದೆ.

ಇದು ಯುವಮೋರ್ಚಾ ಕಾರ್ಯಕರ್ತರ ಹಾಗೂ ಠಾಣಾಧಿಕಾರಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಠಾಣಾಧಿಕಾರಿ ಮುರಳಿ ಅವರು ಪ್ರಶ್ನಿಸುತ್ತಿದ್ದಂತೆ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಮಧ್ಯ ಪ್ರವೇಶಿಸಿದ ಮಂಗಳೂರು ದಕ್ಷಿಣ ಉಪವಿಭಾಗದ ಪ್ರಬಾರ ಎಸಿಪಿ ರವೀಶ್ ನಾಯ್ಕ್ ಅವರು ಬಿಜೆಪಿ ಪ್ರಮುಖರಲ್ಲಿ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಇದನ್ನೂ ಓದಿ:ತೈಲ ತೆರಿಗೆ ಹೆಚ್ಚಳ ವಿರೋಧಿಸಿ ಬಿಜೆಪಿಯಿಂದ ಸೈಕಲ್ ಜಾಥಾ: ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ - BJP protest

ABOUT THE AUTHOR

...view details