ಹರಕೆ ತೀರಿಸಿದ ಹರೀಶ್ ಪ್ರಭು (ETV Bharat) ಶಿವಮೊಗ್ಗ: ಬೇಳೂರು ಗೋಪಾಲಕೃಷ್ಣ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ಗಣಪತಿ ದೇವಾಲಯದಲ್ಲಿ ಹರಕೆ ತೀರಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಬೇಳೂರು ಗೋಪಾಲಕೃಷ್ಣ ಗೆಲ್ಲಬೇಕೆಂದು ಬಿಜೆಪಿ ಕಾರ್ಯಕರ್ತ ಹರೀಶ್ ಪ್ರಭು ಎಂಬವರು ರಿಪ್ಪನ್ ಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿನಾಯಕ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿಸುವ ಹರಕೆ ಹೊತ್ತಿದ್ದರು. ಬೇಳೂರು ಶಾಸಕರಾಗಿ ಆಯ್ಕೆಯಾಗಿದ್ದು, ಅದರಂತೆ ಇಂದು ಹರೀಶ್ ಪ್ರಭು ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲೇ ಹರಕೆ ತೀರಿಸಿದ್ದಾರೆ.
ಗೋಪಾಲಕೃಷ್ಣ ಬೇಳೂರು ಈ ಹಿಂದೆ ಬಿಜೆಪಿಯಲ್ಲಿದ್ದಾಗ, ಹರೀಶ್ ಪ್ರಭು ಪಕ್ಷದ ಕಾರ್ಯಕರ್ತರಾಗಿದ್ದರು. ಗೋಪಾಲಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಬಳಿಕ ಹರೀಶ್ ಪ್ರಭು ಬಿಜೆಪಿಯಲ್ಲೇ ಮುಂದುವರೆದಿದ್ದರು.
ಈ ಕುರಿತು ಹರೀಶ್ ಪ್ರಭು ಮಾತನಾಡಿ, "ಬೇಳೂರು ಗೋಪಾಲಕೃಷ್ಣ ಅವರಿಗೆ ಮೊದಲು ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಲ್ಲಿ ಗೊಂದಲ ಉಂಟಾಗಿತ್ತು. ಈ ವೇಳೆ ನಾನು ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಗೋಪಾಲಕೃಷ್ಣ ಅವರಿಗೆ ಟಿಕೆಟ್ ಸಿಗಬೇಕು ಹಾಗೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬೇಕು ಎಂದು ಹರಕೆ ಹೂತ್ತಿದ್ದೆ. ಬೇಡಿಕೆ ಈಡೇರಿದ ಕಾರಣಕ್ಕೆ ನಾನು ದೇವರಿಗೆ ಹರಕೆ ತೀರಿಸಿದ್ಧೇನೆ. ನಮ್ಮ ಕುಟುಂಬಸ್ಥರು ಜನ ಸಂಘದಿಂದ ಬಂದವರು. ನಾನು ಬಿಜೆಪಿ ಹಾಗೂ ಆರ್ಎಸ್ಎಸ್ನ ಒಡನಾಡಿ. ಗೋಪಾಲಕೃಷ್ಣ ಬೇಳೂರು ನಮ್ಮ ಕುಟುಂಬಕ್ಕೆ ಹತ್ತಿರದವರು. ಹೀಗಾಗಿ ನಾನು ಹರಕೆ ಹೊತ್ತುಕೊಂಡಿದ್ದೆ. ಅದು ಈಗ ಈಡೇರಿದೆ. ಅವರಿಗೆ ಮುಂದೆ ಮಂತ್ರಿಸ್ಥಾನ ಸಿಗಬೇಕು" ಎಂದು ಹಾರೈಸಿದರು.
ಇದನ್ನೂ ಓದಿ:ಮೈಸೂರು ದಸರಾ 2024: ಜಂಬೂ ಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪರಿಚಯ ನಿಮಗಿದೆಯೇ? - Jambo Savari Elephants