ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಉತ್ತುಂಗದಲ್ಲಿದೆ. ಮೋದಿ ಅವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಸವಾಲನ್ನು ನಮ್ಮ ಕಾರ್ಯಕರ್ತರು ಸ್ವೀಕರಿಸಿ, ಅದರಲ್ಲಿ ಯಶಸ್ಸು ಕಾಣಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು ಘಟಕವು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕೇಸು ದಾಖಲಿಸುವುದು ಒಂದು ಸಹಜ ಪ್ರಕ್ರಿಯೆ. ನಮ್ಮ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಆಗಲೇಬೇಕು. ಇಲ್ಲವಾದರೆ, ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ ಎಂದರು.
ಬಿಜೆಪಿ ರಾಜ್ಯ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರ ರಾಜ್ಯದ ಕಾಂಗ್ರೆಸ್ ಸರ್ಕಾರ ಹತಾಶ ಸ್ಥಿತಿಯಲ್ಲಿದೆ. ಕೇವಲ 9 ತಿಂಗಳ ಹಿಂದೆ ಅಧಿಕಾರ ಪಡೆದ ಈ ಕಾಂಗ್ರೆಸ್ ಸರ್ಕಾರವು ಯಾವುದೋ ಒಂದು ಭ್ರಮೆಯಲ್ಲಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿದ ಅಭೂತಪೂರ್ವ ಬೆಂಬಲದಿಂದ ಅಧಿಕಾರದ ಅಮಲಿನಲ್ಲಿ ಅದು ತೇಲುತ್ತಿತ್ತು. ಕಾಂಗ್ರೆಸ್ಸಿಗರಿಗೆ ಇವತ್ತು ಕ್ರಮೇಣವಾಗಿ ಜ್ಞಾನೋದಯ ಆಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಸತ್ಯಸಂಗತಿಗಳು ಮನವರಿಕೆ ಆಗುತ್ತಿವೆ ಎಂದು ಬಿ ವೈ ವಿಜಯೇಂದ್ರ ವಿಶ್ಲೇಷಿಸಿದರು.
ಮುಖ್ಯಮಂತ್ರಿಗಳು ಅತಿ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ತಯಾರಿಗಾಗಿ 10-15 ಜನ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಸಿದ್ಧತೆ ನಡೆಸಿದ್ದರು. ಆದರೆ, ಯಾವೊಬ್ಬ ಸಚಿವರು ಸಹ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ತಯಾರಾಗಲಿಲ್ಲ. ಮೋದಿಯವರ ಜನಪ್ರಿಯತೆ ಕಾರಣಕ್ಕಾಗಿ ತಾವು ಚುನಾವಣೆಯಲ್ಲಿ ಗೆಲ್ಲದೇ ಹೋದರೆ ಹಾಗೂ ಜನರಿಂದ ತಿರಸ್ಕೃತರಾದರೆ ಎಂಬ ಭಯದಿಂದ ಯಾವುದೇ ಸಚಿವರು ಚುನಾವಣೆಯಲ್ಲಿ ನಿಲ್ಲಲು ತಯಾರಾಗಲಿಲ್ಲ ಎಂದು ವಿಶ್ಲೇಷಣೆ ಮಾಡಿದರು.
ಸುಳ್ಳು ಪ್ರಚಾರದಿಂದ ಪ್ರಯೋಜನ ಸಿಗಲಾರದು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಜ್ಞಾನೋದಯ ಆಗಿದೆ. ಕೇವಲ 9 ತಿಂಗಳಲ್ಲಿ ಕೆಟ್ಟ ಸರ್ಕಾರ ಎಂಬ ಹೆಸರನ್ನು ಕಾಂಗ್ರೆಸ್ ಸರ್ಕಾರ ಪಡೆದುಕೊಂಡಿದೆ. ಜನರು ಹತಾಶರಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ಜನಪ್ರಿಯತೆಯನ್ನು ನಾವು ಬಳಸಿಕೊಳ್ಳಬೇಕು ಎಂದ ಅವರು, ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗಿನಂತಿದೆ ಎಂದು ಟೀಕಿಸಿದರು.
ಬಿಜೆಪಿ ರಾಜ್ಯ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರ ಎಲ್ಲ ಕ್ಷೇತ್ರಗಳಲ್ಲಿ ಜನಾಶೀರ್ವಾದ ಖಚಿತ. ಗ್ಯಾರಂಟಿ ಕಾರಣಕ್ಕೆ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ಸಿಗರು ಇದ್ದರು. ಈಗ 28 ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ನಿಗದಿತ ಕ್ಷೇತ್ರವನ್ನು ಗೆಲ್ಲುವ ಭರವಸೆಯೂ ಕಾಂಗ್ರೆಸ್ಸಿಗರಿಗೆ ಇಲ್ಲ. ಬಿಜೆಪಿ- ಜೆಡಿಎಸ್ ಪರವಾಗಿ ಎಲ್ಲ 28 ಕ್ಷೇತ್ರಗಳಲ್ಲೂ ಜನಾಶೀರ್ವಾದ ಲಭಿಸುವುದು ಖಚಿತ ಎಂದು ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಒಬ್ಬ ನಮ್ಮ ಪಾರ್ಟಿ ಲೀಡರ್ ಕಾಂಗ್ರೆಸ್ ಸೇರೋದಕ್ಕೆ ಸಿದ್ಧರಾಗಿದ್ದರು. ಆದರೆ 8ನೇ ತರಗತಿಯಲ್ಲಿ ಓದುತ್ತಿರುವ ಅವರ ಮಗಳು, 'ಅಪ್ಪ ನೀನು ಕಾಂಗ್ರೆಸ್ ಸೇರಬೇಡ, ನೀನು ಮೋದಿ ಜೊತೆ ಇರಬೇಕು' ಎಂದಳು. ಅಷ್ಟು ಚಿಕ್ಕ ಮಗು ಕೂಡ ಇಂದು ಮೋದಿಯನ್ನು ಇಷ್ಟಪಡುತ್ತಾರೆ. ಇದು ಕಾಂಗ್ರೆಸ್ಗೆ ಇಂದು ತಲೆನೋವಾಗಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ನಾನೂ ಲಾಯರ್ ಆದ್ರೆ ಪ್ರಾಕ್ಟಿಸ್ಮಾಡಿಲ್ಲ : ನಾನು ಒಬ್ಬ ಲಾಯರ್. ಆದರೆ ನಾನು ಪ್ರಾಕ್ಟಿಸ್ ಮಾಡಿಲ್ಲ.
ಪ್ರಾಕ್ಟಿಸ್ ಮಾಡಿದ್ದರೆ ನೀವು ಕುಳಿತಲ್ಲಿ ನಾನು ಕೂರ್ತಾ ಇದ್ದೆ. ನೀವು ನಾನು ಕುಳಿತಲ್ಲಿ ಇರ್ತಾ ಇದ್ರಿ ಎಂದು ಹಾಸ್ಯ ಮಾಡಿದ ವಿಜಯೇಂದ್ರ, ಲಾಯರ್ ಹೇಳಿದ್ರೆ ಸತ್ಯ ಎಂದು ಜನ ನಂಬ್ತಾರೆ. ಆದರೆ ಎಷ್ಟು ಸತ್ಯ ಹೇಳ್ತೀರಿ ಎಂದು ನಿಮಗೆ ಗೊತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ ಮೋದಿ ವಿಷಯದಲ್ಲಿ ನೀವು ಏನಾದರೂ ಹೇಳಿದರೆ ಮೋದಿ ವಿಚಾರದಲ್ಲಿ ಜನ ನಿಮ್ಮನ್ನು ನಂಬುತ್ತಾರೆ ಎಂದು ಲಾಯರ್ಸ್ಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮಾತನಾಡಿ, ಕಳೆದ 12 ದಿನಗಳಲ್ಲಿ ಸುಮಾರು 25 ದೂರುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪ್ರಧಾನಿಯವರ ವಿರುದ್ಧ ಮಾತನಾಡಿದ ಶಿವರಾಜ ತಂಗಡಗಿ ವಿರುದ್ಧ ಕಾರಟಗಿ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ವಿವರಿಸಿದರು. ಕೇಂದ್ರ ಗೃಹ ಸಚಿವರ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ ಮುಖ್ಯಮಂತ್ರಿಗಳ ಮಗ ಯತೀಂದ್ರ ಸಿದ್ದರಾಮಯ್ಯರ ವಿರುದ್ಧ ದೂರು ಕೊಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರಕೋಷ್ಠಗಳ ಸಂಚಾಲಕ ದತ್ತಾತ್ರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಅನಿಲ್‍ಕುಮಾರ್, ಲಕ್ಷ್ಮಣ್, ಚುನಾವಣಾ ವಿಭಾಗದ ರಾಜ್ಯ ಪ್ರಮುಖ ದತ್ತಗುರು ಹೆಗಡೆ, ವಿನೋದ್‍ಕುಮಾರ್, ರಾಜಶೇಖರ್, ಹರ್ಷ ಮುತಾಲಿಕ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ :ಬಿಜೆಪಿ ವಿರುದ್ಧ ತಪ್ಪು ನಿರೂಪಣೆನಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆಲುವು, ಲೋಕಸಮರದಲ್ಲಿ ಹಾಗಾಗದಂತೆ ಎಚ್ಚರ ವಹಿಸಿ: ವಿಜಯೇಂದ್ರ - B Y VIJAYENDRA