ಬೆಂಗಳೂರು :ರಾಜತಾಂತ್ರಿಕ ಪಾಸ್ಪೋರ್ಟ್ ಅಮಾನತುಗೊಳಿಸಲು ತನ್ನದೇ ಆದ ನಿಯಮಾವಳಿಗಳಿವೆ. ಅವುಗಳನ್ನು ಪೂರೈಸದೇ ಸಂತೆಯಲ್ಲಿ ಪತ್ರ ಬರೆದಂತೆ ಪ್ರಧಾನಿಗಳಿಗೆ ಪತ್ರ ಬರೆದರೆ ಯಾವುದೇ ಪ್ರಯೋಜನ ಇಲ್ಲ. ರಾಜತಾಂತ್ರಿಕ ಪಾಸ್ಪೋರ್ಟ್ ಸಸ್ಪೆನ್ಷನ್ಗೆ ಇರುವ ನಿಯಮಾವಳಿಗಳನ್ನ ಸಿಎಂ ಸಿದ್ದರಾಮಯ್ಯ ಓದಿಕೊಳ್ಳಬೇಕು ಎಂದು ಪಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದುಪಡಿಸಲು ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ ನಡೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಟೀಕಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಕಾನೂನು ಮತ್ತು ಸಂವಿಧಾನಕ್ಕೆ ಉತ್ಕೃಷ್ಟ ಗೌರವ ಕೊಡುವ ನಿಲುವನ್ನ ಮೊದಲಿನಿಂದಲೂ ಪ್ರತಿಪಾದಿಸುತ್ತದೆ. ಯಾರನ್ನೂ ಕೂಡ ರಕ್ಷಣೆ ಮಾಡುವ ಯಾವುದೇ ಕಿಂಚಿತ್ತು ಅವಕಾಶವನ್ನು ತಪ್ಪಿತಸ್ಥರ ಪರವಾಗಿ ತೆಗೆದುಕೊಳ್ಳುವುದಿಲ್ಲ. ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವ ವಿಚಾರದಲ್ಲಿ ಕಾನೂನಿನ ನಿಯಮಾವಳಿಗಳು ಏನು ಇದ್ದಾವೆಯೋ ಅವುಗಳಿಗೆ ಅನುಸಾರವಾಗಿ ಒಂದು ಕ್ಷಣವೂ ತಡ ಮಾಡದೇ ಕ್ರಮವಹಿಸಲು ಬದ್ದರಿದ್ದೇವೆ ಎಂದರು.
ಆದರೆ, ಇದರಲ್ಲಿ ಮೊದಲನೆಯ ನಿಯಮ, ಪ್ರಕರಣದಲ್ಲಿ ಚಾರ್ಜ್ ಶೀಟ್ ಆಗಿರಬೇಕು ಎನ್ನುವುದಾಗಿದೆ. ಕಾನೂನಿನಲ್ಲಿ ಯಾವ ಯಾವ ಪ್ರಾವಿಷನ್ಗಳು ಇವೆಯೋ ಅದನ್ನು ಮುಖ್ಯಮಂತ್ರಿಗಳು ಓದಿಕೊಳ್ಳಬೇಕು. ಸುಮ್ಮನೆ ಕಾಟಾಚಾರಕ್ಕೆ ಪತ್ರ ಬರೆಯುತ್ತೇನೆ ಎಂದರೆ ಅದಕ್ಕೆ ಅರ್ಥ ಇಲ್ಲ. ಅದಕ್ಕೆಲ್ಲ ನಿಯಮಗಳಿವೆ. ಡಿಪ್ಲೋಮೆಟಿಕ್ ಪಾಸ್ಪೋರ್ಟ್ ಅಮಾನತು ಮಾಡಲು ನಿಯಮಾವಳಿಗಳಿವೆ. ಪ್ರೊಸೀಜರ್ಗಳು ಇವೆ. ಮುಖ್ಯಮಂತ್ರಿಗಳು ಆ ಪ್ರೊಸೀಜರ್ಗಳನ್ನು ಫುಲ್ ಫಿಲ್ ಮಾಡಲಿ ಎಂದು ಆಗ್ರಹಿಸಿದರು.
ನಿಯಮಾವಳಿ ಪ್ರಕಾರ ನಡೆದುಕೊಳ್ಳಲಿ;ಯಾವ ಯಾವ ನಿಬಂಧನೆಗಳಿವೆಯೋ ಆ ಎಲ್ಲಾ ನಿಬಂಧನೆಗಳನ್ನು ಪೂರೈಸಿ ರಾಜ್ಯ ಸರ್ಕಾರ ಕಳುಹಿಸಿಕೊಡಲಿ. ಸುಮ್ಮನೆ ಸಂತೆಯಲ್ಲಿ ಬರೆದಂತೆ ಪತ್ರ ಬರೆಯುವಂತಹದ್ದು ರಾಜಕೀಯ ಪ್ರೌಢಿಮೆ ಮತ್ತು ಪ್ರಬುದ್ಧತೆ ಆಗುವುದಿಲ್ಲ. ಕಾನೂನಿನ ಪ್ರಕಾರ ಎಲ್ಲಾ ನಿಯಮಾವಳಿಗಳನ್ನು ಪೂರ್ಣಗೊಳಿಸಿ ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿದ್ದೇ ಆದಲ್ಲಿ ಒಂದು ಕ್ಷಣ ತಡ ಮಾಡದೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಡಿಪ್ಲೋಮೆಟಿಕ್ ಪಾಸ್ಪೋರ್ಟ್ ಅಮಾನತಿಗೆ ಮೊದಲು ಚಾರ್ಜ್ ಶೀಟ್ ಆಗಿರಬೇಕು. ನಂತರ ವಾರಂಟ್ ಪ್ರೋಕ್ಲಾಮೇಷನ್ ಪ್ರೊಸೀಜರ್ ಆಗಿರಬೇಕು. ತನಿಖೆಯ ಎಲ್ಲ ನಿಬಂಧನೆಗಳನ್ನು ಫುಲ್ ಫಿಲ್ ಮಾಡಿ ಕಳುಹಿಸಬೇಕು. ಸುಮ್ಮನೆ ಹಾರಿಕೆಗೆ ಪತ್ರ ಬರೆದರೆ ಸರಿಯಲ್ಲ. ಮುಖ್ಯಮಂತ್ರಿಗಳ ಮಟ್ಟ ಈ ರೀತಿಗೆ ಬಂದಿತಲ್ಲ ಎಂದು ನೋವಾಗುತ್ತಿದೆ. ತಾನು ಕೆಲಸ ಮಾಡುವುದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳುವ ಮಟ್ಟಕ್ಕೆ ಮುಖ್ಯಮಂತ್ರಿಗಳು ಬಂದು ನಿಂತಿದ್ದಾರೆ. ತಮ್ಮ ವೈಫಲ್ಯ ಹಾಗೂ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಮ್ಮ ಸರ್ಕಾರ ಇದ್ದಾಗ ಇವರು ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡಿದರು. ನಮಗೆ ಅಧಿಕಾರ ನೀಡಿದಲ್ಲಿ ಮೇಕೆದಾಟು ಯೋಜನೆ ಮಾಡುತ್ತೇವೆ ಎಂದರು. ಆದರೆ, ಸರ್ಕಾರ ಬಂದು ಒಂದು ವರ್ಷವಾಯಿತು. ಯೋಜನೆ ಮಾಡುವುದು ಬಿಟ್ಟು ಕೇಂದ್ರದ ಕಡೆ ಬೆರಳು ತೋರುತ್ತಿದ್ದಾರೆ. ಅಂದು ಪಾದಯಾತ್ರೆ ಮಾಡಿದಾಗಲೇ ಇದನ್ನು ಸರಿಯಾಗಿ ಹೇಳಬೇಕಿತ್ತು. ನಮ್ಮನ್ನು ಗೆಲ್ಲಿಸಿ ಯೋಜನೆ ಜಾರಿಗೆ ನಾವು ಮತ್ತೊಬ್ಬರ ಕಾಲು ಹಿಡಿಯುತ್ತೇವೆ. ಕೈ ಮುಗಿಯುತ್ತೇವೆ ಎಂದು ಹೇಳಬೇಕಿತ್ತು. ಅವಕಾಶ ಕೊಟ್ಟಾಗ ಎಲ್ಲ ಸವಾಲುಗಳನ್ನು ಮೀರಿ ಮಾಡಬೇಕಾಗಿದ್ದು ಅವರ ಕರ್ತವ್ಯ. ಈಗ ಮುಖ್ಯಮಂತ್ರಿಗಳು ಕೆಲಸ ಮಾಡಿ ತೋರಿಸಬೇಕು. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ತೋರಿಸುತ್ತಿರುವುದು ಈ ಸರ್ಕಾರ ಹತಾಶವಾಗಿದೆ ಎನ್ನುವುದಕ್ಕೆ ನಿದರ್ಶನ ಎಂದರು.
ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಶಾಸಕರ ಫೋನ್ ಕೂಡ ಟ್ಯಾಪ್ :ಈ ಸರ್ಕಾರ ತನಿಖಾ ಸಂಸ್ಥೆಗಳನ್ನು ಎಷ್ಟರ ಮಟ್ಟಿಗೆ ದುರುಪಯೋಗಪಡಿಸಿಕೊಳ್ಳಬೇಕೋ ಅಷ್ಟು ದುರುಪಯೋಗಪಡಿಸಿಕೊಂಡಿದೆ. ಪೊಲೀಸ್ ಇಲಾಖೆಯಲ್ಲಿ ನನಗೂ ಸ್ನೇಹಿತರಿದ್ದಾರೆ. ಯಾವ ಯಾವುದು ಫೋನ್ ಟ್ಯಾಪಿಂಗ್ ಮಾಡಬೇಕು ಎಂದು ಕ್ರಿಮಿನಲ್ ಕೇಸ್ಗಳಿಗಾಗಿ ಫೋನ್ ಸಂಖ್ಯೆಯನ್ನು ರೆಫರ್ ಮಾಡಿ ತೆಗೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಈ ಸಂಖ್ಯೆಯ ಅವಶ್ಯಕತೆ ಇದೆ ಎಂದು ನಮೂದಿಸಿ ಟ್ಯಾಪ್ ಮಾಡುತ್ತಾರೆ. ಆದರೆ, ಇವರ ಕಾಲದಲ್ಲಿ ಬಿಜೆಪಿಯ ಬಹುತೇಕ ಎಲ್ಲಾ ಶಾಸಕರದ್ದು ಟ್ಯಾಪ್ ಆಗಿದೆ ಎನ್ನುವ ಮಾಹಿತಿಯನ್ನು ಇಲಾಖೆಯಲ್ಲಿರುವ ನನ್ನ ಸ್ನೇಹಿತರು ನೀಡಿದ್ದಾರೆ ಎಂದು ತಿಳಿಸಿದರು.
ನನಗೆ ಇತ್ತೀಚೆಗೆ ಒಂದು ವಿಷಯ ಗೊತ್ತಾಯಿತು. ಕಳೆದ ಆರು ತಿಂಗಳಿನಿಂದ ಕಾಂಗ್ರೆಸ್ ಶಾಸಕರ ಅಸಮಾಧಾನದ ಕುರಿತು ಮಾಹಿತಿ ಪಡೆಯಲು ಅವರ ಫೋನ್ ಟ್ಯಾಪ್ ಮಾಡಲಾಗಿದೆ. ಬಿಜೆಪಿ ಶಾಸಕರ ಚಲನವಲನವನ್ನ ಎಷ್ಟು ಪ್ರಮಾಣದಲ್ಲಿ ಗಮನಿಸುತ್ತಿದ್ದಾರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅವರದ್ದೇ ಪಕ್ಷದ ಶಾಸಕರ ಚಲನವಲನ ಗಮನಿಸುತ್ತಿದ್ದಾರೆ. ಅದಕ್ಕಾಗಿ ಫೋನ್ ಟ್ಯಾಪಿಂಗ್ ಮಾಡುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಯಾರ ಮೇಲೂ ವಿಶ್ವಾಸ ಇಲ್ಲ. ಅಭಿವೃದ್ಧಿ ದೃಷ್ಟಿಕೋನ ಇಲ್ಲ. ಅಕ್ಷರಶಃ ಡಿ ಫ್ಯಾಕ್ಟ್ ಆಗಿ ಎಲ್ಲರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ :ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಫೋನ್ ಕದ್ದಾಲಿಕೆಯಂಥ ನೀಚ ಕೆಲಸ ಮಾಡಿಲ್ಲ: ಸಿದ್ದರಾಮಯ್ಯ - Phone Tapping Allegation