ಬೆಂಗಳೂರು:ಲೋಕಸಭಾ ಚುನಾವಣೆ, ಪಕ್ಷ ಸಂಘಟನೆಯ ದೃಷ್ಟಿಯಿಂದ ರಾಷ್ಟ್ರದಾದ್ಯಂತ ಬಿಜೆಪಿ ರೈತ ಮೋರ್ಚಾ ವತಿಯಿಂದ ಗ್ರಾಮ ಪರಿಕ್ರಮ ಯಾತ್ರೆಯನ್ನು ಫೆಬ್ರವರಿ 12ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ನಡಹಳ್ಳಿ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಫೆ.12ರಂದು ಮಧ್ಯಾಹ್ನ 12.30ಕ್ಕೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಯಾತ್ರೆಯನ್ನು ಉದ್ಘಾಟಿಸುವರು. ದೇಶದ ಎಲ್ಲ ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಉದ್ಘಾಟನೆ ನೆರವೇರಲಿದೆ. ದೇಶದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಎಲ್‍ಇಡಿ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರ ಉದ್ಘಾಟನೆ ಕಾರ್ಯಕ್ರಮದ ಪ್ರಸಾರ ಇರಲಿದೆ ಎಂದರು.
ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜ್‍ಕುಮಾರ್ ಚಾಹರ್ ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲು ತಿಳಿಸಿದ್ದು, ರಾಜ್ಯದ ನಾಲ್ಕೈದು ನಗರ ಪ್ರದೇಶ ಹೊರತುಪಡಿಸಿ 32 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರೈತ ಮೋರ್ಚಾದ ಪದಾಧಿಕಾರಿಗಳು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.
ಪಕ್ಷದ ಪ್ರಣಾಳಿಕೆಗೆ ರೈತರ ಸಲಹೆ: ಕಾರ್ಯಕ್ರಮ ಪ್ರಾರಂಭಕ್ಕೆ ಮೊದಲು ಗೋಪೂಜೆ ಮಾಡಲಾಗುವುದು. 30 ದಿನಗಳ ಕಾಲ ಪರಿಕ್ರಮ ಯಾತ್ರೆ ಇರುತ್ತದೆ. ಪ್ರತಿದಿನ ಪ್ರತಿ ಜಿಲ್ಲೆಯ 5 ಹಳ್ಳಿಗಳಿಗೆ ಪ್ರವಾಸ ಮಾಡಲಾಗುವುದು. ರೈತರ ಸಮಸ್ಯೆ ಆಲಿಸುವುದು ಮತ್ತು ಅವರ ಬೇಕು ಬೇಡಗಳನ್ನು ಪಟ್ಟಿ ಮಾಡಿ ರೈತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರ ಮುಖಾಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸಲಾಗುವುದು. ಭವಿಷ್ಯದಲ್ಲಿ ನಮ್ಮ ಸರ್ಕಾರದ ಯೋಜನೆ ಮತ್ತು ಪಕ್ಷದ ಪ್ರಣಾಳಿಕೆ ರೂಪಿಸುವಲ್ಲಿ ರೈತರ ಸಲಹೆಗಳನ್ನು ಅಳವಡಿಸಿಕೊಳ್ಳುವುದೇ ಯಾತ್ರೆಯ ಪ್ರಮುಖ ಉದ್ದೇಶ ಎಂದು ನಡಹಳ್ಳಿ ಮಾಹಿತಿ ನೀಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಗ್ರಾಮೀಣ ಜನರಿಗಾಗಿ ಅನುಷ್ಠಾನಕ್ಕೆ ತಂದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಿದ್ದೇವೆ. ಬಿಜೆಪಿಯ ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದಾಗ ಜಾರಿಗೊಳಿಸಿದ ರೈತಪರ ಕಾರ್ಯಕ್ರಮಗಳ ಕುರಿತು ಎಲ್ಲ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ ಎಂದು ವಿವರಣೆ ನೀಡಿದರು. ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್, ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಹಾಜರಿದ್ದರು.
ಇದನ್ನೂ ಓದಿ:ನಾವು ಯಾರನ್ನೂ ಸೋಲಿಸಲು ಹೊರಟಿಲ್ಲ, ಶಿಕ್ಷಣ ಕ್ಷೇತ್ರಕ್ಕೆ ಯೋಗ್ಯ ವ್ಯಕ್ತಿ ಆಯ್ಕೆ: ಬಿ.ವೈ.ವಿಜಯೇಂದ್ರ