ಬೆಂಗಳೂರು: ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ವಿಪರೀತ ಹೊರೆ ಆಗಿದ್ದು, ಏರಿಸಿದ ದರವನ್ನು ವಾಪಸ್ ಪಡೆಯಬೇಕು. ಅಲ್ಲದೆ, ರೈತರಿಗೆ ಬರೆ ಹಾಕುವ ಸರ್ಕಾರದ ನೀತಿ ನಿರ್ಧಾರಗಳನ್ನು ಬದಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಹಾಲಿನ ದರ ಏರಿಕೆ ಮಾಡಿದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಇಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗೆ ನೀಡುತ್ತಿದ್ದ 4 ಸಾವಿರ ರೂ. ಕಿಸಾನ್ ಸಮ್ಮಾನ್ ಮೊತ್ತವನ್ನು ಮತ್ತೆ ರೈತರ ಖಾತೆಗೆ ವರ್ಗಾಯಿಸುವಂತೆ ಅವರು ಒತ್ತಾಯಿಸಿದರು.
ಕಳೆದ 8 ತಿಂಗಳಿಂದ 957 ಕೋಟಿ ರೂ. ಹಾಲು ಉತ್ಪಾದಕರಿಗೆ ಕೊಡಬೇಕಾದ ಮೊತ್ತ ಬಾಕಿ ಉಳಿದಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಬೇಕು. ಟ್ರಾನ್ಸ್ಫಾರ್ಮರ್ಗಳು 40 ಸಾವಿರಕ್ಕೆ ಸಿಗುತ್ತಿದ್ದವು. ಈಗ 2 ಲಕ್ಷಕ್ಕೆ ಏರಿಸಿದ್ದಾರೆ. ಅದನ್ನು 40 ಸಾವಿರಕ್ಕೆ ಸಿಗುವಂತೆ ಮಾಡಬೇಕು. ಬಿತ್ತನೆ ಬೀಜ, ಗೊಬ್ಬರದ ದರ ಗಗನಕ್ಕೆ ಏರಿದ್ದು, ಹಿಂದಿನ ದರದಲ್ಲೇ ಅವು ಸಿಗುವಂತೆ ನೋಡಿಕೊಳ್ಳಬೇಕು. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನವಾಗಿ 6 ಸಾವಿರದಿಂದ 18 ಸಾವಿರ ರೂ. ವರೆಗೆ ಕೊಡುತ್ತಿದ್ದೆವು. ಅದನ್ನು ಕೂಡಲೇ ಪುನರಾರಂಭಿಸುವಂತೆ ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹೆಚ್ಚು ಹಣ ಕೊಡಿ ಎನ್ನಲು ನಿಮಗೆ ಯಾರು ಹಕ್ಕು ಕೊಟ್ಟಿದ್ದಾರೆ. ಇದು ಜನರಿಗೆ ಮಾಡುವ ಮೋಸ. ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಕಡಿಮೆ ಆಗಿದೆ. ನಮ್ಮ ಸರ್ಕಾರ ಇದ್ದಾಗ ಒಂದು ರೂ. ಹೆಚ್ಚಿಸಿದಾಗ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಸ್ಕೂಟರ್ ಶವಯಾತ್ರೆ ಮಾಡಿದ್ದರು. ಹಾಗಿದ್ದರೆ ನಾವು ಯಾವ ಯಾತ್ರೆ ಮಾಡಬೇಕೆಂದು ಹೇಳಿ.ಒಂದು ರೂ. ಹೆಚ್ಚಿಸಿದಾಗ ತರಕಾರಿ, ದವಸಧಾನ್ಯಗಳ ಬೆಲೆ ಹೆಚ್ಚಾಗಲಿದೆ. ಜನರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದೂ ಸಿದ್ದರಾಮಯ್ಯನವರು ತಿಳಿಸಿದ್ದರು. ಈಗ ಅವೆಲ್ಲವೂ ಕಡಿಮೆ ಆಗಲಿದೆಯೇ ಎಂದು ಪ್ರಶ್ನೆ ಮಾಡಿದರು.