ಕರ್ನಾಟಕ

karnataka

ETV Bharat / state

ಉಪ್ಪು ಹುಳಿ ಖಾರ ಇಲ್ಲದ ಜನ ವಿರೋಧಿ ಬಜೆಟ್: ಸಿಎಂ ನಿಲುವು ಖಂಡಿಸಿ ಬಿಜೆಪಿ ಸಭಾತ್ಯಾಗ

ಬಜೆಟ್​ ವೇಳೆ ಸಿಎಂ ಕೇಂದ್ರ ಸರ್ಕಾರವನ್ನು ಟೀಕಿಸಿದ್ದನ್ನು ಖಂಡಿಸಿ, ವಾಕ್​ ಔಟ್​ ಮಾಡಿದ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ವಿಧಾನಸೌಧದ ದ್ವಾರದ ಎದುರು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

BJP protest
ಬಿಜೆಪಿ ಪ್ರತಿಭಟನೆ

By ETV Bharat Karnataka Team

Published : Feb 16, 2024, 1:04 PM IST

Updated : Feb 16, 2024, 6:59 PM IST

ಸಿಎಂ ನಿಲುವು ಖಂಡಿಸಿ ಬಿಜೆಪಿ ಸಭಾತ್ಯಾಗ

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಆಯವ್ಯಯ ರಾಜ್ಯ ಸರ್ಕಾರದ ಅಭಿವೃದ್ಧಿ ವಿರೋಧಿ ಬಜೆಟ್ ಎಂದು ಘೋಷಣೆ ಕೂಗಿದ ಬಿಜೆಪಿ ಸದಸ್ಯರು ವಿಧಾನಸೌಧ ದ್ವಾರದ ಎದುರು ನಡೆಸಿದ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.

ವಿಧಾನಸಭಾ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಆರಂಭಿಸುತ್ತಿದ್ದಂತೆ ಬಜೆಟ್ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು ವಿಧಾನಸಭೆ ಪ್ರವೇಶದ್ವಾರದ ಬಳಿ ಆಗಮಿಸಿ ಪ್ರತಿಭಟನೆ ನಡೆಸಿದರು. ಬಜೆಟ್ ಅಭಿವೃದ್ಧಿ ವಿರೋಧಿಯಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ, ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, "ಸಿದ್ದರಾಮಯ್ಯ ಅವರು ಇವತ್ತು ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಅಲ್ಲಿ ರಾಜಕೀಯ ಸ್ಕೋಪ್ ಇರೋದಿಲ್ಲ, ಜನರ ದೃಷ್ಟಿಯಿಂದ ಬಜೆಟ್ ಮಾಡುತ್ತಾರೆ ಅಂದುಕೊಂಡಿದ್ದೆವು. ಪದೇ ಪದೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ. ಕೇಂದ್ರ ಸರ್ಕಾರವನ್ನು ತೆಗಳುತ್ತಾರೆ. 15ನೇ ಹಣಕಾಸು ಆಯೋಗದಲ್ಲಿ ಸಿಎಂ ಆಗಿದ್ದವರು ಯಾರು? ನೀವೇ ಹೋಗಿ ಒಪ್ಪಿಗೆ ಕೊಟ್ಟಿದ್ದೇಕೆ? ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ಕೇಂದ್ರವನ್ನು ಟೀಕೆ ಮಾಡುತ್ತಿದ್ದೀರಿ. ಆಡಳಿತ ನಡೆಸಲು ಆಗಿಲ್ಲ ಎಂದರೆ ಅಧಿಕಾರ ಬಿಟ್ಟು ಕೆಳಗಿಳಿಯಿರಿ" ಎಂದು ಸಿಟ್ಟು ಹೊರ ಹಾಕಿದರು.

ನಿಮ್ಮ ಕಿವಿ ಹಿಂಡಲು ನಾವಿರೋದು - ಅಶೋಕ್​:"ಕೇಂದ್ರ ಸರ್ಕಾರದ ಮೇಲೆ ಸವಾಲು ಹಾಕ್ತೀರಾ? ಇದನ್ನು ಖಂಡಿಸಿ ವಾಕ್ ಔಟ್ ಮಾಡಿದ್ದೇವೆ. ಹಿಂದೆ ಕಾಂಗ್ರೆಸ್​ನವರು ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿದ್ದರು. ಈಗ ಹೇಳಿ ಏನು ಮಾಡೋದು ಅಂತಾ? ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ಸರ್ಕಾರದ ತಪ್ಪುಗಳನ್ನು ಹೇಳೋದಕ್ಕೆ ಜನ ನಮ್ಮನ್ನು ಕುರಿಸಿರೋದು" ಎಂದರು.

"ಸಿಎಂ ಸಿದ್ದರಾಮಯ್ಯ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು. 7 ಕೋಟಿ ಜನರ ಮೇಲೆ ಸಾಲದ ಹೊರೆ ಹಾಕಿದ್ದಾರೆ. 1 ಲಕ್ಷ ಕೋಟಿ ಸಾಲ ದಾಟಿಸಿದ ಮೊದಲ ಸಿಎಂ ಸಿದ್ದರಾಮಯ್ಯ. ಕೃಷಿ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ. ಬೆಂಗಳೂರಿಗೆ ಸುರಂಗ ಮಾರ್ಗ ಕೊಟ್ಟಿದ್ದಾರೆ. ಕೆಂಪಣ್ಣ ಆರೋಪಿಸಿದ್ದ 50 ಪರ್ಸೆಂಟ್ ಹಣ ಇಡೋಕೆ ಈ ಸುರಂಗ ಮಾರ್ಗ ಮಾಡಿರಬೇಕು. ಒಟ್ಟಾರೆಯಾಗಿ ಉಪ್ಪು ಹುಳಿ ಇಲ್ಲದ ಬಜೆಟ್" ಎಂದು ಟೀಕಿಸಿದರು.

ರೈತ ವಿರೋಧಿ ಬಜೆಟ್ - ವಿಜಯೇಂದ್ರ​: ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, "ಸಿಎಂ ಮಂಡನೆ ಮಾಡಿರುವ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅಂಶವಿಲ್ಲ. ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಈ ಬಜೆಟ್ ಮಾಡಿದ್ದಾರೆ. ಮೊನ್ನೆ ದೆಹಲಿ ಚಲೋ ಮಾಡಿದ್ರು. ಇವತ್ತು ಕೂಡ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ರೈತರಿಗೆ ಅನುಕೂಲ ಆಗದೇ ಇರುವ ಬಜೆಟ್. ಇವರ ಪ್ರಣಾಳಿಕೆಯಲ್ಲಿ ನೇತಾರರ ಅಭಿವೃದ್ಧಿ ಬಗ್ಗೆ ಹೇಳಿದ್ದರು. ಆದರೆ, ಇವತ್ತು ಆ ಮಾತೇ ಇಲ್ಲ. ನುಡಿದಂತೆ ನಡೆಯದ ಸರ್ಕಾರ ಇದು. ರೈತರಿಗೆ ಬಡವರಿಗೆ ಅನ್ಯಾಯ ಆಗಿರೋ ಬಜೆಟ್. ಬರಗಾಲ ಸಂದರ್ಭದಲ್ಲಿ ಯಾವುದೇ ರೀತಿ ಸಹಾಯ ಆಗದೇ ಇರೋ ಬಜೆಟ್. ಒಬ್ಬ ಅನುಭವಿ ಸಿಎಂ ಈ ರೀತಿ ಬಜೆಟ್ ಮಾಡ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ರಾಜ್ಯದ ಜನರ ಪಾಲಿಗೆ ಬದುಕಿದ್ದು ಈ ಸರ್ಕಾರ ಸತ್ತಂತೆ" ಎಂದರು.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಬಜೆಟ್​​ನಲ್ಲಿ ಹೊಸ ಕಾರ್ಯಕ್ರಮ ಘೋಷಣೆ ಮಾಡಿಲ್ಲ. ಮೇಕೆದಾಟಿಗೆ ಕಾಲ್ನಡಿಗೆ ಮಾಡಿ ಬಂದರು ಈಗ ಏನೂ ಮಾಡಿಲ್ಲ. ಮಹದಾಯಿ ಯೋಜನೆ ಬಗ್ಗೆ ಏನು ಮಾಡಿದರು?. ಪೆರಿಫರೆಲ್ ರಿಂಗ್ ರಸ್ತೆಯನ್ನು ಪ್ರಾರಂಭವೇ ಮಾಡಿಲ್ಲ. ಎಲ್ಲವೂ ಸುಳ್ಳು ಹೇಳಿದ್ದಾರೆ. ಗ್ಯಾರಂಟಿ ಗ್ಯಾರಂಟಿ ಅಂತ ಕಾಲ ಕಳೆದಿದ್ದಾರೆ. ಹೊಸ ಕಾರ್ಯಕ್ರಮ ಏನೂ ಮಾಡಿಲ್ಲ. ಬೆಂಗಳೂರಿಗೆ ಏನೂ ಕೊಟ್ಟಿಲ್ಲ. ಈ ಬಜೆಟ್ ಹಿಂದೆ ರಾಜ್ಯವನ್ನು ಸರ್ವನಾಶ ಮಾಡುವ ಕೆಲ ಹಿತಾಸಕ್ತಿಗಳು ಇದ್ದಾರೆ. ಉಚಿತವಾಗಿ ಗ್ಯಾರಂಟಿ ಅಂತ ಸಮಾನತೆ ಕೊಟ್ಟಿದ್ದೇನೆ ಅಂತ ಜನರನ್ನು ಲೂಟಿ ಮಾಡುತ್ತಿದ್ದೀರಿ. ಇದು ದರೋಡೆಕೋರರ ಸರ್ಕಾರ ಎಂದು ಟೀಕಿಸಿದರು.

ಮಾಜಿ ಸಿಎಂ ಬೊಮ್ಮಾಯಿ ಮಾತನಾಡಿ, ಇದು ಬಜೆಟ್ ಅಲ್ಲ ರಾಜಕೀಯ ಭಾಷಣವಾಗಿದೆ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಕೇಂದ್ರದ ತೆರಿಗೆ ಪಾಲಿನಿಂದ ಮೂರು ಸಾವಿರ ಕೋಟಿ ರೂ ಹೆಚ್ಚಿಗೆ ಬಂದಿದೆ ಎಂದು ಬಜೆಟ್​​ನಲ್ಲಿ ಹೇಳಿದ್ದಾರೆ. ನೀರಾವರಿಗೆ ಯಾವುದೇ ಅನುದಾನ ಇಲ್ಲ. ಮಹದಾಯಿ, ಮೇಕೆದಾಟು ಹಾಗೂ ಭದ್ರಾ ಮೇಲ್ದಂಡೆಗೆ ಯಾವುದೇ ಅನುದಾನ ಇಲ್ಲ. ರೈತರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ. ಸಾಲ ಹೆಚ್ಚಿಗೆ ಮಾಡಿದ್ದಾರೆ. ಇದೊಂದು ರಾಜಕೀಯ ಭಾಷಣ, ಶೂನ್ಯ ಬಜೆಟ್, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಶೂನ್ಯ ಬಜೆಟ್, ದಲಿತರಿಗೆ ಮೋಸದ ಬಜೆಟ್ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಮಾತನಾಡಿ, "ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ಇದು ಅಭಿವೃದ್ಧಿಗೆ ವಿರೋಧ ಆಗಿದೆ. ಅಭಿವೃದ್ಧಿಗೆ ಹಣ ನೀಡಿಲ್ಲ. ರೈತರ ಬಡವರ ಹಾಗೂ ಅಭಿವೃದ್ಧಿಯ ವಿರೋಧಿಯಾಗಿದೆ" ಎಂದು ಟೀಕಿಸಿದರು.

ಇದನ್ನೂ ಓದಿ:ಪೊಲೀಸ್​, ಅರಣ್ಯ ಇಲಾಖೆಗಳಂತೆ ಇತರ ಇಲಾಖೆಗಳಲ್ಲೂ ಕ್ರೀಡಾಪಟುಗಳಿಗೆ ಶೇ.2ರಷ್ಟು ಹುದ್ದೆ ಮೀಸಲು

Last Updated : Feb 16, 2024, 6:59 PM IST

ABOUT THE AUTHOR

...view details