ಕರ್ನಾಟಕ

karnataka

ETV Bharat / state

ವಕ್ಫ್ ನೋಟಿಸ್ ವಿರುದ್ಧ ನವೆಂಬರ್ 4 ರಂದು ಬಿಜೆಪಿಯಿಂದ ಹೋರಾಟ: ಆರ್​. ಅಶೋಕ್ - BJP PROTEST AGAINST WAQF NOTICE

ಧಮ್​ ಇದ್ದರೆ ರೈತರ ಭೂಮಿಯನ್ನು ವಕ್ಫ್​ ಆಸ್ತಿಯೆಂದು ನೋಟಿಸ್​ ಕೊಟ್ಟ ಅಧಿಕಾರಿಯನ್ನು ಜೈಲಿಗೆ ಹಾಕಿ, ಅದು ಬಿಜೆಪಿ ಅವಧಿಯಲ್ಲೇ ಆಗಿದ್ದರೂ ಪರವಾಗಿಲ್ಲ ಎಂದು ಆರ್​. ಅಶೋಕ್​ ಕಾಂಗ್ರೆಸ್​ಗೆ ಸವಾಲೆಸೆದಿದ್ದಾರೆ.

Opposition Leader R Ashok
ವಿಪಕ್ಷ ನಾಯಕ ಆರ್​. ಅಶೋಕ್​ (ETV Bharat)

By ETV Bharat Karnataka Team

Published : Nov 1, 2024, 12:48 PM IST

ಬೆಂಗಳೂರು: "ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿ ರೈತರಿಗೆ ನೋಟಿಸ್ ನೀಡಿರುವ ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನವೆಂಬರ್ 4 ರಂದು ರಾಜ್ಯ ಬಿಜೆಪಿ ಹೋರಾಟ ನಡೆಸಲಿದ್ದು, ವಕ್ಫ್ ವಿವಾದವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಕ್ಫ್ ಬೋರ್ಡ್ ಹೆಸರಿಗೆ ಹೋಗಿರುವ ರೈತರ ಭೂಮಿ ವಾಪಸ್ ರೈತರಿಗೆ ಸಿಗಲಿ, ದೀಪಾವಳಿ ಆಚರಿಸಲಿ. ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಅನ್ನದಾತನಿಗೆ ಖನ್ನ ಹಾಕುವ ಕೆಲಸ ಜಮೀರ್ ಟೀಂ ಮತ್ತು ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯಗೆ ಮುಸ್ಲಿಂ ಭೂತ ಹಿಡಿದಿದೆ. ಕೋಲಾರದಲ್ಲಿ ದೇವಸ್ಥಾನದ ಭೂಮಿಯನ್ನು ವಕ್ಫ್ ಬೋರ್ಡ್ ಆಸ್ತಿ ಮಾಡಿದ್ದಾರಂತೆ ನಾಗಮಂಗಲ, ಹುಬ್ಬಳ್ಳಿ, ಬೆಳಗಾವಿ ಎಲ್ಲ ಕಡೆ ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿದ್ದಾರೆ. ರಾಜ್ಯಾದ್ಯಂತ ದಾಖಲೆ ತಿದ್ದಿ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ" ಎಂದರು.

"ಸರ್ಕಾರವೇ ರೈತರ ಜಮೀನುಗಳನ್ನು ಕಬಳಿಕೆ ಮಾಡುತ್ತಿದೆ. ರೈತ ಸಂಘ ಬೀದಿಗಿಳಿದು ಹೋರಾಡಬೇಕು. ಇಲ್ಲದಿದ್ದರೆ ವ್ಯವಸಾಯಕ್ಕೂ ಭೂಮಿ ಇರಲ್ಲ. ಪಾರ್ಲಿಮೆಂಟೂ ನಮ್ಮದೇ ಎಂದು ಮತಾಂDರು ಹೇಳುತ್ತಿದ್ದಾರೆ. ತಲೆಕೆಟ್ಟವರು ವಿಧಾನಸೌಧವೂ ನಮ್ಮದೇ ಎನ್ನುತ್ತಾರೆ. ಟಿಪ್ಪು ಕೊಡಗಿನಲ್ಲಿ ಲಕ್ಷ ಜನರನ್ನು ಕೊಂದು, ಕ್ರಿಶ್ಚಿಯನ್ನರನ್ನು ಮತಾಂತರ ಮಾಡುತ್ತಿದ್ದ. ಮತಾಂತರ ಲವ್​ - ಜಿಹಾದ್ ಆಯ್ತು ಈಗ ಜಮೀನಾಂತರ ಮಾಡುತ್ತಿದ್ದಾರೆ. ನವೆಂಬರ್ 4 ರಂದು ಇದರ ವಿರುದ್ಧ ಹೋರಾಟ ಮಾಡುತ್ತೇವೆ. ರೈತರ ಹೆಸರು ಪಹಣಿಯಲ್ಲಿ ಬರುವವರೆಗೆ ಹೋರಾಟ ಬಿಡಲ್ಲ ಬಿಜೆಪಿ ತಾರ್ಕಿಕ ಹೋರಾಟ ಮಾಡದಿದ್ದರೆ ಮುಡಾ ಕೇಸ್ ಈ ಹಂತಕ್ಕೆ ಬರುತ್ತಿರಲಿಲ್ಲ. ಸಿಎಂ ಮೇಲೆ 420 ಕೇಸ್ ಬುಕ್ ಆಗಿದೆ. ಇಡಿ, ಸಿಬಿಐ ಎಂಟ್ರಿ ಆಗಿದೆ. ಇದೆಲ್ಲ ಬಿಜೆಪಿ ಹೋರಾಟದ ಪರಿಣಾಮ. ಬಿಜೆಪಿ ರಾಷ್ಟ್ರೀಯ ಪಕ್ಷ, ಕಾಂಗ್ರೆಸ್ ಥರ 3 - 4 ರಾಜ್ಯದಲ್ಲಿರುವ ಪಾರ್ಟಿ ಅಲ್ಲ. ಬಿಜೆಪಿ ಹಿಟ್ ಮಾಡಿದ್ರೆ ಕಾಂಗ್ರೆಸ್ ರನ್ ಮಾಡಬೇಕು" ಎಂದರು.

ಸಾರಿಗೆ ಸಚಿವರಿಗೆ ಫೋನ್ ಮಾಡದೆ ಇವರಿಗೆ ಮಾಡಿದ್ರಾ?:"ಫ್ರೀ ಬಸ್ ಪ್ರಯಾಣ ಮರುಪರಿಶೀಲಿಸಿ ಎಂದು ಡಿಸಿಎಂಗೆ ಮಹಿಳೆಯರು ಫೋನ್​, ವಾಟ್ಸ್ಆ್ಯಪ್​​ ಮಾಡಿದ್ರಂತೆ. ಸಾರಿಗೆ ಸಚಿವರಿಗೆ ಫೋನ್ ಮಾಡದೆ ಇವರಿಗೆ ಮಾಡಿದ್ರಾ? ಶಕ್ತಿ ಯೋಜನೆ ಕ್ಯಾನ್ಸಲ್ ಮಾಡಲು ಹೊರಟಿದ್ದಾರೆ. ಖಜಾನೆ ಖಾಲಿ ಆಗಿದೆ. ಬಿಪಿಎಲ್ ಕ್ಯಾನ್ಸಲ್ ಮಾಡಲು ಹೊರಟಿದ್ದಾರೆ. ಕಾರ್, ಅಟೋ, ಆರ್​ಸಿಸಿ ಮನೆ ಇದ್ರೂ ಬಿಪಿಎಲ್ ಕ್ಯಾನ್ಸಲ್. ಎಲೆಕ್ಷ‌ನ್ ಎಲ್ಲ ಮುಗಿಯಿತು. ಹಾಗಾಗಿ ಗ್ಯಾರಂಟಿ ಯೋಜನೆ ವೆಚ್ಚ ಇಳಿಸಲು ಪ್ಲಾನ್ ಮಾಡಿದ್ದಾರೆ. ಬಡವರ ಶಾಪಕ್ಕೆ ಸರ್ಕಾರ ಗುರಿಯಾಗಿದೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಇರಲ್ಲ ಎಂದು ನಾವು ಹೇಳಿದ್ವಿ. ಈಗ ಅದರಂತೆ ಶಕ್ತಿ ಯೋಜನೆ ಸ್ಥಗಿತಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಅದ್ಯಾವ ಮುಖ ಇಟ್ಕೊಂಡು ಕಾಂಗ್ರೆಸ್ ಉಪಚುನಾವಣೆ ಎದುರಿಸುತ್ತೋ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಹೇಳ್ತಿದ್ರು, ತಾಯಿ ಕ್ಷೇತ್ರ ರಾಮನಗರ ಎನ್ನುತ್ತಿದ್ರು. ಹಾಗಿದ್ದರೆ ಬೆಂಗಳೂರು ಉಸ್ತುವಾರಿ ಯಾಕೆ ತಗೊಂಡ್ರಿ. ರಾಮಲಿಂಗಾರೆಡ್ಡಿ ಚಾತಕಪಕ್ಷಿಯಂತೆ ಕಾಯ್ತಿದ್ದಾರೆ. ಇಲ್ಲಿ ಫಸಲು ಚೆನ್ನಾಗಿದೆ. ಅದಕ್ಕೆ ಡಿ.ಕೆ.ಶಿವಕುಮಾರ್ ಉಸ್ತುವಾರಿ ತಗೊಂಡಿದ್ದಾರೆ. ಜನರೇ ಕಾಂಗ್ರೆಸ್​ಗೆ ಪಾಠ ಕಲಿಸಲಿದ್ದಾರೆ" ಎಂದರು.

ನೋಟಿಸ್ ಕೊಟ್ಟ ಅಧಿಕಾರಿ ಜೈಲಿಗೆ ಹಾಕಲು ಧಮ್ ಇದೆಯಾ?- ಅಶೋಕ್​ ಪ್ರಶ್ನೆ:"ವಕ್ಫ್ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ ವಿಚಾರದಲ್ಲಿ ಈಗಾಗಲೇ ರೈತರು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ‌ ಬೆಂಬಲ ಕೊಡುತ್ತಿದೆ. ರೈತರು ಬೀದಿಗೆ ಇಳಿಯುವಂತೆ ಮಾಡಿದ್ದು ಯಾರು? ನೋಟಿಸ್ ಕೊಟ್ಟ ಅಧಿಕಾರಿನ ಜೈಲಿಗೆ ಹಾಕಲು ಧಮ್ ಇದೆಯಾ? ಬಿಜೆಪಿ ಕಾಲದಲ್ಲಿ ಆಗಿದ್ರೂ ಕ್ರಮ ತಗೊಳ್ಳಿ. ರೈತರು ದಂಗೆ ಎದ್ದಿದ್ದಾರೆ. ಅದಕ್ಕೆ‌ ಉತ್ತರ ಕೊಡಿ, ರಾಜಕೀಯ ಆಮೇಲೆ" ಎಂದರು.

"ಹೆಚ್ಎಂಟಿ ಜಮೀನಿನ ಬಗ್ಗೆ ಅರಣ್ಯ ಸಚಿವರು ಅರಣ್ಯ ರೋದನ ಮಾಡುತ್ತಿದ್ದಾರೆ. ಹೆಚ್ಎಂಟಿ ಎದುರಲ್ಲೇ ನನ್ನ ಮನೆ ಇದೆ. 65 ಎಕರೆ ನಮ್ಮ ಕುಟುಂಬದಿಂದಲೇ ಹೆಚ್ಎಂಟಿಗೆ ಕೊಟ್ಟಿದ್ದೇವೆ. ಖಂಡ್ರೆ ಅವರು ನಮ್ಮ ಮೇಲೂ ಕೇಸ್ ಹಾಕಬೇಕಾಗತ್ತದೆ. ಕಾಂಗ್ರೆಸ್​ನವರಿಗೆ ತಲೆಯಲ್ಲಿ ಮೆದುಳು ಇದೆಯಾ? ಹೆಚ್ಎಂಟಿ ನೆಹರೂ ಅವರು ಪ್ರಾರಂಭ ಮಾಡಿದ್ದು. ಆಗ ಈ ಜಮೀನನ್ನು ಕೊಟ್ಟಿದ್ದು ಯಾರು? ಕಾಂಗ್ರೆಸ್ ಸರ್ಕಾರವೇ ಇದ್ದಾಗ ಈ ಭೂಮಿ ‌ಕೊಟ್ಟಿದ್ದು. ಖಂಡ್ರೆ ಪ್ರಕಾರ ನೆಹರೂ ಅವರಿಗೂ, ಕೆಂಗಲ್ ಹನುಮಂತಯ್ಯ ಅವರು, ಕೆ‌ಸಿ ರೆಡ್ಡಿ ಅವರಿಗೂ ಬೆಲೆ ಇಲ್ಲ. ನೆಹರು ತಪ್ಪು ಮಾಡಿದ್ದಾರೆ ಎಂದು ಹೇಳ್ತೀರಾ? ಅರಣ್ಯ ಭೂಮಿಯಲ್ಲಿ ಫ್ಯಾಕ್ಟರಿ ಮಾಡೋದು ಅಪರಾಧ. ಅದನ್ನು ನೆಹರು ಉದ್ಘಾಟನೆ ಮಾಡಿದ್ದರು. ಈಗ ಅವರ ಮೇಲೆ ಕೇಸ್ ಹಾಕುತ್ತೀರಾ? ರಾಜ್ಯ ಸರ್ಕಾರ 1 ರೂ.ಗೆ ಭೂಮಿ ನೀಡಿದೆ. ಅಂದಿನ ಪಿಎಂ, ಸಿಎಂ ಅಪರಾಧಿಗಳಾ? ರಪ್ತು ಮಾಡುತ್ತಿದ್ದ ಕಂಪನಿ ಇದೊಂದೇ ಆಗಿತ್ತು. ಅಂತಹ ಕಂಪನಿಗೆ ಈ ಸರ್ಕಾರ ಅವಹೇಳನ ಮಾಡ್ತಿದೆ. ಒತ್ತುವರಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ, ಕೇಸ್ ಹಾಕಿ ನೋಡೋಣ. ಸುಮ್ನೆ ಕುಮಾರಸ್ವಾಮಿ ಟಾರ್ಗೆಟ್ ಮಾಡೋದು ಸರಿಯಲ್ಲ. ನೆಹರು, ಕೆಂಗಲ್ ಮೇಲೆ ‌ಕೇಸ್ ಹಾಕ್ತೀರಾ? ನನ್ನ ಪ್ರಶ್ನೆಗೆ ಉತ್ತರ ಕೊಡಿ" ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸುವಂತೆ ಕೋರಿ ಬಸನಗೌಡ ಯತ್ನಾಳ್ ಪ್ರಧಾನಿ ಮೋದಿಗೆ ಪತ್ರ

ABOUT THE AUTHOR

...view details