ಹುಬ್ಬಳ್ಳಿ:ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗ್ರಹಿಸಿದರು. ಲೋಕಸಭೆ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯಕ್ಕೆ ಆಗಮಿಸಿರುವ ಅವರು, ಇತ್ತೀಚೆಗೆ ಹುಬ್ಬಳ್ಳಿಯ ಕಾಲೇಜಿನಲ್ಲಿ ಕೊಲೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ, ಮಹಾನಗರಪಾಲಿಕೆಯ ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾಳಿಗಾದ ದುಸ್ಥಿತಿ, ಅನ್ಯಾಯ ಇನ್ಯಾವ ವಿದ್ಯಾರ್ಥಿನಿ ಹಾಗೂ ಯುವತಿಯರಿಗೂ ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ಜೆ. ಪಿ. ನಡ್ಡಾ ಒತ್ತಾಯಿಸಿದರು. ರಾಜ್ಯದಲ್ಲಿ ಇಂದು ಇಂತಹ ಮತಾಂಧ ಯುವಕರಿಂದ ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವಂತಹ ಪರಿಸ್ಥಿತಿ ತಲೆದೋರಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಬಿಜೆಪಿಯು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ದೇಶವು ಈ ಕುಟುಂಬದ ಜೊತೆಗೆ ಇರಲಿದೆ. ಘಟನೆ ಬಗ್ಗೆ ಸಿಎಂ ಹಾಗೂ ಗೃಹಸಚಿವರ ಹೇಳಿಕೆಗಳು ತುಷ್ಟೀಕರಣವನ್ನು ತೋರುತ್ತದೆ. ಅವರ ಹೇಳಿಕೆಗಳು ತನಿಖೆಯನ್ನು ಡೈವರ್ಟ್ ಮಾಡುತ್ತವೆ. ಇದನ್ನು ಕರ್ನಾಟಕದ ಜನರು ಕ್ಷಮಿಸುವುದಿಲ್ಲ. ಇಂತಹ ಘಟನೆಗಳು ನಡೆಯಬಾರದು ಎಂದರು.
ಸಿಬಿಐ ತನಿಖೆಗೆ ಆಗ್ರಹ: ರಾಜ್ಯ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ವಿದ್ಯಾರ್ಥಿನಿಯ ತಂದೆಯೂ ಕೂಡ ಈ ಬಗ್ಗೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಅದನ್ನು ನಾನೀಗ ನಿಮ್ಮ ಮುಂದಿಡುತ್ತಿದ್ದೇನೆ. ಅವರಿಗೂ ರಾಜ್ಯ ಪೊಲೀಸರ ಮೇಲೆ ನಂಬಿಕೆ ಕಡಿಮೆ ಇದೆ. ಹೀಗಾಗಿ, ತನಿಖೆಗೆ ತನಿಖಾ ಸಂಸ್ಥೆ ಸಿಬಿಐ ನೆರವು ಪಡೆಯಬೇಕು ಎಂದು ನಡ್ಡಾ ಆಗ್ರಹಿಸಿದರು.